– ಒಳಮೀಸಲಾತಿ ಅನುಷ್ಠಾನಕ್ಕೆ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ
ಬೆಂಗಳೂರು: ಧರ್ಮಸ್ಥಳ (Dharmasthala) ಬುರುಡೆ ಕೇಸ್‌ನ ಎಸ್‌ಐಟಿ (SIT) ತನಿಖೆಗೆ ಹೈಕೋರ್ಟ್‌ನಲ್ಲಿ ತಡೆ ನೀಡಿರುವ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಧರ್ಮಸ್ಥಳ ಕೇಸ್‌ನಲ್ಲಿ ಎಸ್‌ಐಟಿ ತನಿಖೆಗೆ ಕೋರ್ಟ್ ತಡೆ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ಆದೇಶ ಸಂಪೂರ್ಣವಾಗಿ ನಾನು ನೋಡಿಲ್ಲ. ಕಾನೂನು ಇಲಾಖೆ ಮತ್ತು ಎಜಿ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ತೀವಿ. ಅಪೀಲ್ ಹಾಕಬೇಕಾ? ಸುಪ್ರೀಂಕೋರ್ಟ್‌ಗೆ ಹೋಗಬೇಕಾ? ಅಂತ ಚರ್ಚೆ ಮಾಡಿ ಆಮೇಲೆ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.ಇದನ್ನೂ ಓದಿ: ಪೊಲೀಸ್ ಇಲಾಖೆ ಸೇರಿ ಯಾವುದೇ ಇಲಾಖೆಯಲ್ಲಿ ಲಂಚ ಪಡೆಯೋದನ್ನ ಸಹಿಸಲ್ಲ: ಪರಮೇಶ್ವರ್
ಇದೇ ವೇಳೆ ಒಳಮೀಸಲಾತಿ ಅನುಷ್ಠಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಒಳ ಮೀಸಲಾತಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬೇಕು ಅಂತ ತೀರ್ಮಾನ ಆಗಿತ್ತು. ಎ.ಬಿ.ಸಿ ಅಂತ ಕ್ಯಾಟಗರಿ ಮಾಡಿದ್ವಿ, ಅದಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು. ಆ ಬಳಿಕ ಕಾಯ್ದೆ ಮಾಡಬೇಕು ಅಂತ ಹೇಳಲಾಗಿತ್ತು. ಮೊನ್ನೆಯ ಸಿಎಂ ನೇತೃತ್ವದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಿಗೆ, ನೇರವಾಗಿ ಬಿಲ್ ತರಲು ನಿರ್ಧಾರ ಮಾಡಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ತನ್ನಿ ಅಂತ ಕಾನೂನು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಲ್ ಬರುತ್ತೆ ಎಂದು ಹೇಳಿದ್ದಾರೆ.
ಒಳ ಮೀಸಲಾತಿ ಆದೇಶ ರದ್ದು ಮಾಡೋಕೆ ಸರ್ಕಾರ ಪ್ಲ್ಯಾನ್ ಮಾಡ್ತಿದೆ ಎಂಬ ಮಾಜಿ ಡಿಸಿಎಂ ಗೋವಿಂದ್ ಕಾರಜೋಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಗೋವಿಂದ ಕಾರಜೋಳಗೆ ನಾವು ಏನ್ ಮಾಡ್ತಾ ಇದ್ದೇವೆ ಅಂತ ಅರ್ಥ ಆಗಿಲ್ಲ. ಒಳ ಮೀಸಲಾತಿ ವಿಚಾರ ಅವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅವರ ಕಾಲದಲ್ಲಿ ಏನೋ ಮಾಡೋಕೆ ಹೋಗಿ ಏನೇನೋ ಗೊಂದಲ ಮಾಡಿದ್ದರು. ಅದನ್ನ ನಾವು ಬಗೆಹರಿಸಿದಿದ್ದೇವೆ. ಈಗ ಅದಕ್ಕೆ ಕಾನೂನಿನ ಶಕ್ತಿ ಕೊಡಬೇಕು ಅಂತ ಮಾಡ್ತಾ ಇದ್ದೇವೆ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಯುಟಿ ಖಾದರ್ ಆರೋಪ ಮುಕ್ತರಾಗಲಿ – ವಿಶ್ವೇಶ್ವರ ಹೆಗಡೆ ಕಾಗೇರಿ
