‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

Public TV
2 Min Read
bigg boss 1

ತೆಲುಗಿನ ಬಿಗ್ ಬಾಸ್ (Bigg Boss) ಆವೃತ್ತಿ 7 ಇನ್ನಷ್ಟೇ ಆರಂಭವಾಗಬೇಕಿದೆ. ಅದಕ್ಕೂ ಮುನ್ನ ಆಂಧ್ರದ ಹೈಕೋರ್ಟ್ (High Court) ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್ ನೀಡಿದೆ. ಹಿಂದಿ, ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಶೋ ಪ್ರಸಾರವಾಗುತ್ತಿದ್ದು, ಇದೇ ಮೊದಲ ಬಾರಿಗೆ ಈ ಶೋನಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಮತ್ತು ಅದರಲ್ಲಿ ಅಶ್ಲೀಲ ಕಂಟೆಂಟ್ ಇರುತ್ತದೆ ಎನ್ನುವ ಕಾರಣಕ್ಕಾಗಿ ಆಂಧ್ರಪ್ರದೇಶದ ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು.

bigg boss

ತೆಲುಗು ಯುವಶಕ್ತಿ ಅಧ್ಯಕ್ಷ ಮತ್ತು ನಿರ್ಮಾಪಕ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ ಎನ್ನುವವರು ಬಿಗ್ ಬಾಸ್ ಶೋ ವಿರುದ್ಧ ಹೈಕೋರ್ಟಿಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯ ‘ಕಿರುತೆರೆಯ ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ಇದ್ದರೆ ಅದರ ಮೇಲೆ ಯಾಕೆ ನಿಗಾ ಇಡಬಾರದು?’ ಎಂದು ಅಭಿಪ್ರಾಯ ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ ಎರಡೂ ಇದರಲ್ಲಿ ಅಡಗಿರುವುದರಿಂದ ಆಳವಾಗಿ ವಿಚಾರಣೆ ನಡೆಸುವುದು ಸೂಕ್ತವೆಂದು ಪೀಠ ಅಭಿಪ್ರಾಯಪಟ್ಟಿದೆ.

Bigg boss Hindi 3

ಬಿಗ್ ಬಾಸ್ ಶೋ ಪರ ವಕೀಲರು ‘ಕಿರುತೆರೆಗೆ ಸೆನ್ಸಾರ್ (Censor) ವ್ಯವಸ್ಥೆಯಿಲ್ಲ. ಅಲ್ಲದೇ, ಸೆನ್ಸಾರ್ ಮಾಡುವುದೇ ಆದರೆ ಕೇಂದ್ರ ಸರಕಾರ ಕಾನೂನು ರೂಪಿಸಬೇಕು. ಇಂತಹ ಶೋಗಳು ಇಷ್ಟವಾಗದೇ ಇದ್ದರೆ ಚಾನೆಲ್ ಬದಲಾಯಿಸುವ ಎಲ್ಲ ಹಕ್ಕುಗಳು ನೋಡುಗನಿಗೆ ಇದೆ ಎಂದು ವಾದಿಸಿದರು. ವಾದವನ್ನು ಆಲಿಸಿದ ಪೀಠ ‘ಆಕ್ಷೇಪಾರ್ಹ ಕಂಟೆಂಟ್ ಗಳ ಪ್ರಸಾರಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಶ್ನೆ ಮಾಡಿತು. ಜೊತೆಗೆ ಶೋ ಪ್ರಸಾರಕ್ಕೂ ಮುನ್ನ ಸೆನ್ಸಾರ್ ಮಾಡುವ ವಿಚಾರದಲ್ಲಿ ಕೇಂದ್ರಕ್ಕೆ ಸೂಚನೆ ನೀಡುವ ಬಗ್ಗೆ ಯೋಚಿಸುವುದಾಗಿಯೂ ಕೋರ್ಟ್ ಹೇಳಿತು.

Bigg boss Hindi 2

ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದ ಘನ ನ್ಯಾಯಾಲಯವು, ಸೆನ್ಸಾರ್ ಮಂಡಳಿಗೆ, ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಚಾನೆಲ್ ಮತ್ತು ಶೋ ಆಯೋಜಕರಿಗೆ ಹಾಗೂ ಬಿಗ್ ಬಾಸ್ ಶೋ ನಡೆಸಿಕೊಡುವ ನಟ ನಾಗಾರ್ಜುನ್ (Nagarjuna) ಅವರಿಗೆ ‘ಆಕ್ಷೇಪಾರ್ಹ ಕಂಟೆಂಟ್ ಮತ್ತು ಸೆನ್ಸಾರ್ ಕುರಿತಂತೆ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಆದೇಶ ನೀಡಿದೆ.

ಈಗಾಗಲೇ ತೆಲುಗಿನ ಬಿಗ್ ಬಾಸ್ ಸೀಸನ್ 7 ಪ್ರೋಮೋ ರಿಲೀಸ್ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸ್ಪರ್ಧಿಗಳ ಆಯ್ಕೆಯನ್ನೂ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಆದೇಶ ಮತ್ತು ಅಭಿಪ್ರಾಯ ಆಯೋಜಕರನ್ನು ಚಿಂತೆಗೆ ದೂಡಿದೆ.

Web Stories

Share This Article