ಬೆಂಗಳೂರು: ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಶಮನ ಮಾಡಲು ಹೈಕಮಾಂಡ್ ಮುಂದಾಗಿದ್ದು ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಈಗ 15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಏಳು ಮಂದಿಗೆ ಸಚಿವರಾಗಲು ಅವಕಾಶವಿದೆ. ಇದೇ ರೀತಿಯಾಗಿ ಅಸಮಾಧಾನವನ್ನು ಹೊರಹಾಕಿದರೆ ಖಾಲಿ ಇರುವ ಏಳು ಸಚಿವ ಸ್ಥಾನದಿಂದ ಹಾಗೂ ನಿಗಮ ಮಂಡಳಿ ಸ್ಥಾನ ಹಂಚಿಕೆಯಲ್ಲಿ ಅವಕಾಶ ವಂಚಿತರಾಗುತ್ತಾರೆ. ಇದನ್ನು ಬಂಡಾಯ ಶಾಸಕರಿಗೆ ಗಮನಕ್ಕೆ ತರುವಂತೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸೂಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ತಿಳಿಸಿವೆ.
Advertisement
Advertisement
ಸಚಿವ ಸ್ಥಾನದಿಂದ ವಂಚಿತರಾಗಿರುವ ಅನೇಕ ಹಿರಿಯ ಶಾಸಕರು ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು. ಅಲ್ಲದೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳು ಸಭೆಯಲ್ಲಿ ಭಾಗವಹಿಸಬಹುದೆಂದು ಆಹ್ವಾನ ನೀಡಿದ್ದರು. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರಕ್ಕೆ ಕುತ್ತು ಬರಬಹುದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ಶಾಸಕರಿಗೆ ಎಚ್ಚರಿಕೆ ನೀಡಿದೆ.
Advertisement
ಹೈಕಂಮಾಡ್ ವಿವಿಧ ಮೂಲಗಳಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು, ಪ್ರತ್ಯೇಕ ಸಭೆ ನಡೆಸುವುದು, ಹಾಗೂ ಹೈ ಕಮಾಂಡ್ ವಿರುದ್ಧ ಮಾತನಾಡುವ ಶಾಸಕರ ಮಾಹಿತಿ ಕಲೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾ ಶಾಸಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
Advertisement
ಲಿಂಗಪ್ಪಗೆ ಶೋಕಾಸ್ ನೋಟಿಸ್:
ರಾಮನಗರದಲ್ಲಿ ಮಂಗಳವಾರ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು, ರಾಮನಗರ ಕ್ಷೇತ್ರವನ್ನು ಪರಮೇಶ್ವರ್ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಲಿಂಗಣ್ಣ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಬುಧವಾರ ಶೋಕಾಸ್ ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾಧ್ಯಮಗಳ ಮುಂದೆ ಲಘುವಾಗಿ ಮಾತನಾಡಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದೀರಿ. ರಾಮನಗರ ಉಪ ಚುನಾವಣೆಯ ಕುರಿತು ಪಕ್ಷ ಸಭೆಯಲ್ಲಿ ಚರ್ಚಿಸಬಹುದಿತ್ತು. ಆದರೆ ನೀವು ಹಾಗೇ ಮಾಡಲಿಲ್ಲ. ನಿಮ್ಮ ತಪ್ಪಿಗೆ ಏಳು ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.