ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರದ 11 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದ ಉಳಿವಿಗೆ ಪ್ರಯತ್ನ ನಡೆಸುತ್ತಿರುವ ಹೈಕಮಾಂಡ್ ಬಂಡಾಯ ಶಾಸಕರ ಮನವೊಲಿಕೆಗೆ ಹಿರಿಯ ಸಚಿವರ ರಾಜೀನಾಮೆಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಯು.ಟಿ.ಖಾದರ್, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್, ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಹಿರಿಯ ಸಚಿವರಿಂದ ರಾಜೀನಾಮೆ ಪಡೆದು ಈ ಸ್ಥಾನಗಳನ್ನು ಅತೃಪ್ತರಿಗೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಸರ್ಕಾರ ಉಳಿಸಿಕೊಳ್ಳುವುದ್ದಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುವ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರು ಹಿರಿಯ ಸಚಿವರ ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ತೆರವಾಗುವ ಸ್ಥಾನಗಳನ್ನು ಬಂಡಾಯ ನಾಯಕರಾಗಿರುವ ರಾಮಲಿಂಗಾರೆಡ್ಡಿ, ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್ ಹಾಗೂ ಎಚ್ ವಿಶ್ವನಾಥ್ ಅವರಿಗೆ ನೀಡಲು ಚಿಂತನೆ ನಡೆಸಲಾಗಿದೆ.
ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲೇ ಬಂಡಾಯ ಶಾಸಕ ಮನವೊಲಿಕೆ ಮುಂದಾಗಿದ್ದರು. ಅಲ್ಲದೇ ರಾಜೀನಾಮೆ ಬಳಿಕ ಕಾಂಗ್ರೆಸ್ ಶಾಸಕರಾದ ರಾಮಲಿಂಗಾ ರೆಡ್ಡಿ, ಮುನಿರತ್ನ ಸೇರಿದಂತೆ ಮತ್ತೆ ಇಬ್ಬರು ಶಾಸಕರು ಡಿಕೆ ಶಿವಕುಮಾರ್ ಅವರೊಂದಿಗೆ ತೆರಳಿದ್ದಾರೆ. ಈಗಾಗಲೇ ಸ್ಪೀಕರ್ ಅವರು ರಾಜೀನಾಮೆ ಪರಿಶೀಲನೆಗೆ 3 ದಿನಗಳ ಅವಧಿ ಕೇಳಿರುವುದರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ ಹೆಚ್ಚಿನ ಸಮಯವೇ ಸಿಕ್ಕಿದೆ. ಈ ಹಿನ್ನೆಲೆಯಲ್ಲಿಯೇ ಹಿರಿಯ ಸಚಿವರ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತ ಮಾಧ್ಯಮಗಳೊಂದಿಗೆ ಸಚಿವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು, ಸರ್ಕಾರ ಉಳಿಸಿಕೊಳ್ಳಲು ನಮ್ಮ ಮುಂದೆ ಎಲ್ಲಾ ಅವಕಾಶಗಳು ಇದೆ. ಈಗಾಗಲೇ ಹೈಕಮಾಂಡ್‍ಗೆ ಮಾಹಿತಿ ನೀಡಿದ್ದು, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ತಮ್ಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಮುಂದಿನ ಅವಧಿಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸಮ್ಮಿಶ್ರ ಸರ್ಕಾರ ಮುಂದುವರಿಯುತ್ತದೆ ಎಂದರು.