ಬೆಂಗಳೂರು: ಮಾಜಿ ಸಿಎಂ ಹಾಗೂ ರಾಜ್ಯ ಬಿಜೆಪಿ (BJP) ಅಧಿನಾಯಕ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರ ಜನ್ಮದಿನದಂದು (ಫೆ.27) ಸಮಾವೇಶ ನಡೆಸಲು ಮುಂದಾಗಿದ್ದ ಬೆಂಬಲಿಗರಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಪಕ್ಷದಲ್ಲಿ ಪರಸ್ಪತ ಬಣ ಬಡಿದಾಟ, ಮೇಲಾಟ ನಡೀತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹೆಸರಿನಲ್ಲಿ ಸಮಾವೇಶ ( B.S Yediyurappa’s Birthday) ನಡೆಸಬೇಕೆಂಬ ಆಪ್ತರ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರು ಎರಚಿದೆ.
ಸಮಾವೇಶವೂ ಬೇಡ, ಗೊಂದಲವೂ ಬೇಡ, ಸದ್ಯಕ್ಕೆ ತೆಪ್ಪಗಿರಿ ಅಂತ ದೆಹಲಿಯಿಂದ ಖಡಕ್ ಸಂದೇಶವನ್ನು ಬಿಎಸ್‌ವೈ ಆಪ್ತರಿಗೆ ಹಾಗೂ ಬೆಂಬಲಿಗರಿಗೆ ಬಂದಿದೆ. ಇದೀಗ ಸಮಾವೇಶಕ್ಕೆ ಪುಲ್‌ಸ್ಟಾಪ್ ಬಿದ್ದಿದ್ದು, ಕ್ಷೇತ್ರವಾರು ಆಚರಣೆಗೆ ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಅವಧಿಯಲ್ಲಿ ಜಾರಿಗೆ ತರಲಾದ ಯಶಸ್ವಿ ಯೋಜನೆಗಳ ಫಲಾನುಭವಿಗಳನ್ನು ಸೇರಿಸಿ ಆ ಮೂಲಕ ಅವರ ಹುಟ್ಟುಹಬ್ಬ ಆಚರಿಸಲು ಸಿದ್ಧತೆಗಳು ನಡೆದಿವೆ. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಆಚರಣೆಗೆ ಆಪ್ತರು ಮುಂದಾಗಿದ್ದಾರೆ.
ಭಾಗ್ಯಲಕ್ಷ್ಮೀ ಬಾಂಡ್, ಉಚಿತ ಸೈಕಲ್, ಸಾಲಮನ್ನಾ ಯೋಜನೆಯ ಫಲಾನುಭವಿಗಳ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಲಾಗುವುದು. ಪ್ರತಿ ಕ್ಷೇತ್ರದಲ್ಲೂ ಯೋಜನಾ ಫಲಾನುಭವಿಗಳನ್ನ ಸೇರಿಸಿ, ಸ್ಥಳೀಯ ಮಟ್ಟದಲ್ಲಿ ಸಣ್ಣ ಕಾರ್ಯಕ್ರಮಕ್ಕೆ ತೀರ್ಮಾನ ಮಾಡಲಾಗಿದೆ. ಈ ವೇಳೆ ಪ್ರತಿ ಕ್ಷೇತ್ರದಲ್ಲೂ ಅನ್ನದಾನಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.
ಯಡಿಯೂರಪ್ಪರ ಆಯುರಾರೋಗ್ಯ ವೃದ್ಧಿಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸಲು ಕಾರ್ಯಕರ್ತರು ಸಹ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ 4 ಸಾವಿರ ರೂ. ರೈತ ಸಮ್ಮಾನ್ ನಿಧಿ ನೀಡಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ. ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಕಾರ್ಯಕರ್ತರು ರಕ್ತದಾನ ಶಿಬಿರ, ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದಾರೆ.