-ರೂಪಾ ಶಶಿಧರ್ ಬೇರೆ ಜಿಲ್ಲೆ ಪ್ರತಿನಿಧಿಸುತ್ತಾರೆ, ನನ್ನೊಟ್ಟಿಗೆ ಹೋಲಿಸಬೇಡಿ
-ಜನವರಿ ಅಥವಾ ಫೆಬ್ರವರಿಗೆ ಇಂದಿರಾ ಕಿಟ್ ವಿತರಣೆ
ನವದೆಹಲಿ: ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರಾಚನೆ ವಿಚಾರದಲ್ಲಿ ಹೈಕಮಾಂಡ್ (Congress High Command) ಶೀಘ್ರವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ಆಗ್ರಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿ ಬಳಿಕ ದೆಹಲಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಸೇರಿ ಎಲ್ಲ ಗೊಂದಲಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರೇ ಉತ್ತರ ಕೊಡಬೇಕು. ಸಿಎಂ ಆಯ್ಕೆ ಸಮಯದಲ್ಲಿ ಏನೇ ಮಾತು ಕೊಟ್ಟಿದ್ದರೂ ಕೂಡ ಬೇಗನೇ ತೀರ್ಮಾನ ಮಾಡಿ ಎಂದು ಹೇಳಿದ್ದೇನೆ. ಪ್ರತಿದಿನ ಸಿಎಂ ಬದಲಾವಣೆ ಅಂತಾ ಬರಬಾರದು, ಸಿದ್ದರಾಮಯ್ಯ ಕೂಡಾ ಹೈಕಮಾಂಡ್ ಮಾತಿಗೆ ಬದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಡಿಸಿಎಂ ಕೂಡಾ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಹೈಕಮಾಂಡ್ ಒಂದು ತೀರ್ಮಾನ ಮಾಡಬೇಕು, ಇಂತಹ ಗೊಂದಲದಿಂದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟಾಗಲಿದೆ ಎಂದಿದ್ದಾರೆ.ಇದನ್ನೂ ಓದಿ: ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ಅಗತ್ಯ ಸಹಕಾರ ನೀಡಿ – ಕೇರಳ ಸಿಎಸ್‌ಗೆ ಶಾಲಿನಿ ರಜನೀಶ್ ಪತ್ರ
ದಲಿತ ಸಿಎಂ ವಿಚಾರದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮುಂದೆ ಪ್ರಸ್ತಾಪ ಮಾಡಿಲ್ಲ, ಇದನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇವೆ. ದಲಿತ ಸಿಎಂ ಬೇಕು ಎನ್ನುವ ಬೇಡಿಕೆ ಖರ್ಗೆ ಕೆಪಿಸಿಸಿ ಅಧ್ಯಕ್ಷರಾದ ಕಾಲದಿಂದಲೂ ಇದೆ. ಖರ್ಗೆ ಅವರು ಸಿಎಂ ಆಗಬೇಕಿತ್ತು ಎಂಬ ಸಂದರ್ಭ ಬರಲಿಲ್ಲ, ನಮ್ಮದು ಡಿಮ್ಯಾಂಡ್, ಆದರೆ ಹೈಕಮಾಂಡ್ ತೀರ್ಮಾನ ಅಂತ್ಯ. ಈ ನಡುವೆ ಒಳಮೀಸಲಾತಿ ಜಾರಿ ಮಾಡಿ, ಎಲ್ಲ ಜಾತಿಗೂ ನ್ಯಾಯ ನೀಡುವ ಮೂಲಕ ದಲಿತರಿಗೆ ನ್ಯಾಯ ನೀಡಿದೆ ಎಂದು ತಿಳಿಸಿದ್ದಾರೆ.
ರೂಪಾ ಶಶಿಧರ್‌ಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕ, ನಾನು ಬೇರೆ ಜಿಲ್ಲೆಯಿಂದ ಆಯ್ಕೆಯಾಗಿದ್ದೇನೆ, ರೂಪಾ ಅವರು ಬೇರೆ ಜಿಲ್ಲೆ ಪ್ರತಿನಿಧಿಸುತ್ತಿದ್ದಾರೆ. ಅವರನ್ನು ನನ್ನೊಟ್ಟಿಗೆ ಹೋಲಿಕೆ ಮಾಡಬೇಡಿ, ನನಗೆ ಸಾಕಷ್ಟು ಅನುಭವ ಇದೆ. ನನ್ನ ಹಾಗೇ ಹಲವು ಹಿರಿಯ ನಾಯಕರಿದ್ದಾರೆ. ಎಲ್ಲರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ವಿಚಾರ ಮುನ್ನೆಲೆಗೆ ಬಂದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವಕಾಂಕ್ಷಿಗಳು ಭೇಟಿಯಾಗುತ್ತಿದ್ದಾರೆ. ಬುಧವಾರ (ನ.19) ದೆಹಲಿಯಲ್ಲಿ ಶಾಸಕರಾದ ಬಿ.ಆರ್ ಪಾಟೀಲ್, ಕೋನರೆಡ್ಡಿ ಭೇಟಿಯಾಗಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮೋದಿ ಪಾದವನ್ನು ಮುಟ್ಟಿ ನಮಸ್ಕರಿಸಿದ ಐಶ್ವರ್ಯಾ ರೈ ಬಚ್ಚನ್
ಮಾಲ್ದಂಡಿ ಜೋಳಕ್ಕೆ ಹೆಚ್ಚಿನ ಎಂಎಸ್‌ಪಿ ದರ ನಿಗದಿಗೆ ಮನವಿ:
ಇನ್ನೂ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂಎಸ್ಪಿ ಬೆಲೆಯಲ್ಲಿ ರಾಗಿ ಖರೀದಿಸಿದ ಬಾಕಿ ಹಣ ನೀಡುವಂತೆ ಹಾಗೂ ಮಾಲ್ದಂಡಿ ಜೋಳಕ್ಕೆ ಹೆಚ್ಚಿನ ಎಂಎಸ್‌ಪಿ ದರ ನಿಗಧಿ ಮಾಡಲು ಜೋಶಿ ಅವರಿಗೆ ಮನವಿ ಮಾಡಿದೆ. ರಾಜ್ಯದಲ್ಲಿ ಆರು ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಎಂಎಸ್‌ಪಿಯಲ್ಲಿ ಖರೀದಿಸುತ್ತಿದ್ದೇವೆ. ಕಳೆದ ವರ್ಷ ಖರೀದಿ ಮಾಡಿದ ಬಾಕಿ ಎರಡು ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕಿದೆ. ಜನವರಿಯಿಂದ ಹೊಸ ಖರೀದಿ ಶುರುವಾಗಲಿದೆ ಬಾಕಿ ಹಣ ನೀಡಿದರೆ ಮುಂದೆ ಖರೀದಿಗೆ ಸಹಾಯ ಆಗಲಿದೆ ಎಂದಿದ್ದಾರೆ.
ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ಬೆಳೆ ಖರೀದಿ ಮಾರ್ಗಸೂಚಿಗಳು ಮತ್ತು ಪರಿಷ್ಕೃತ ಹಂಚಿಕೆ ಆದೇಶಗಳೊಂದಿಗೆ ಸಂಬಂಧಿತ ಪ್ರಮುಖ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.#FoodSecurity #DelhiMeet #GovernmentOfIndia #khmuniyappa #prahladjoshi pic.twitter.com/aa0C2t5FVq
— KH Muniyappa (@KHMuniyappaklr) November 19, 2025
ಕರ್ನಾಟಕಕ್ಕೆ ನಾಲ್ಕು ಲಕ್ಷ ಮೆಟ್ರಿಕ್ ಟನ್ ಸಾಕಾಗುತ್ತದೆ. ಕೇಂದ್ರ ಸರ್ಕಾರ ರಾಗಿ ಬೆಳೆಗೆ ಇರುವ ಡಿಮ್ಯಾಂಡ್‌ನಿಂದ ಆರು ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಆರು ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಇದರಿಂದ ರೈತರಿಗೆ ಒಳ್ಳೆಯ ಬೆಲೆ ನೀಡಲು ಅನುಕೂಲವಾಗಲಿದೆ, ಪ್ರತಿ ಕ್ವಿಂಟಾಲ್‌ಗೆ ಐದು ಸಾವಿರ ರೈತರಿಗೆ ನೀಡಲಾಗುತ್ತಿದೆ. ಇನ್ನೂ ಭೇಟಿ ವೇಳೆ ಜೋಶಿ ಅವರು ಬಾಕಿ ಹಣ ಬಿಡುಗಡೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪಡಿತರ ಹಂಚಿಕೆ ಸೊಸೈಟಿ ಮಾಲೀಕರಿಗೆ ಕಮಿಷನ್ ಹೆಚ್ಚಿಸಿದೆ. ಪ್ರತಿ ಕ್ಷಿಂಟಾಲ್‌ಗೆ 32 ರೂ. ಏರಿಕೆ ಮಾಡಿದೆ. ಇದಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಜೋಳ ಉತ್ಪಾದನೆ ಕಡಿಮೆ ಇದೆ, ಇದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ, ಹೆಚ್ಚು ದಿನ ಶೇಖರಿಸಲು ಸಾಧ್ಯವಿಲ್ಲ, ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ. ಮಾಲ್ಡಂಡಿ ಜೋಳಕ್ಕೆ ಡಿಮ್ಯಾಂಡ್ ಹೆಚ್ಚಿದೆ, ಎಂಎಸ್‌ಪಿಯಲ್ಲಿ ರೈತರು ನೀಡಲ್ಲ, ಈ ಜೋಳಕ್ಕೆ ಎಂಎಸ್‌ಪಿ ಹೆಚ್ಚಿಸಲು ಇದೇ ಸಮಯದಲ್ಲಿ ಮನವಿ ಮಾಡಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಚೀನಾ, ವಿಶ್ವಸಂಸ್ಥೆಯ ಒಕ್ಕೂಟ ಸೇರ್ಪಡೆಗೆ ಭಾರತ ಮುಕ್ತ ನಿಲುವು: ಪ್ರಹ್ಲಾದ್ ಜೋಶಿ ಸ್ಪಷ್ಟ ನುಡಿ

