ಬೆಂಗಳೂರು/ಬೀದರ್: ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸಿ ಜೈಲು ಶಿಕ್ಷೆ ಅನುಭವಿಸಿರುವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಬ್ರೇಕ್ ಬಿದ್ದಿದೆ.
ಆಪ್ತ ಗೆಳೆಯ ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲು ಪ್ರಯತ್ನ ನಡೆಸುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಶಾ ಪ್ರಶ್ನೆಗೆ ಸ್ವರಾಜ್, ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ವಲಯದಲ್ಲಿ ಪಕ್ಷ ಸೇರ್ಪಡೆ ವಿಚಾರಕ್ಕೆ ಯಾರಿಂದಲೂ ಬೆಂಬಲ ಸಿಗದ ಕಾರಣ ರೆಡ್ಡಿಯ ಬಿಜೆಪಿ ಸೇರ್ಪಡೆಗೆ ಬ್ರೇಕ್ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೆಲವು ಪ್ರಕರಣದಲ್ಲಿ ಆರೋಪ ಮುಕ್ತರಾದರೂ ಇನ್ನು ಕೆಲವುಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಎಲ್ಲ ಪ್ರಕರಣದಿಂದ ಮುಕ್ತರಾದ ಬಳಿಕ ನಂತರ ಪಕ್ಷಕ್ಕೆ ಸೇರಿಸಬೇಕೋ? ಬೇಡವೋ ಎನ್ನುವ ತೀರ್ಮಾನ ತೆಗೆದುಕೊಳ್ಳೊಣ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.
Advertisement
Advertisement
ನೋಟ್ ನಿಷೇಧವಾದ ಬಳಿಕ ರೆಡ್ಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಗಳ ಮದುವೆಯನ್ನು ಆದ್ಧೂರಿಯಾಗಿ ನಡೆಸಿದ್ದರು. ಈ ಮದುವೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿ ಟೀಕೆಗೆ ರೆಡ್ಡಿ ಗುರಿಯಾಗಿದ್ದರು. ಮುಂದೆ ಕೆಲವೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ವೇಳೆ ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಜನ ಗಮನಿಸುತ್ತಿರುತ್ತಾರೆ. ಈ ಸಂದಭದಲ್ಲಿ ಸೇರ್ಪಡೆಗೊಳಿಸಿದರೆ ಜನತೆಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ರೆಡ್ಡಿ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
Advertisement
ಜನಾರ್ದನ ರೆಡ್ಡಿ ಸೇರ್ಪಡೆ ವಿಚಾರವಾಗಿ ಬೀದರ್ ನಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆ ವಿಚಾರದ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಹೇಳಿದರು. ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ ಎಂದು ಮರು ಪ್ರಶ್ನೆ ಹಾಕಿದಾಗ ರೆಡ್ಡಿ ಸೇರ್ಪಡೆ ಬಗ್ಗೆ ಇದೂವರೆಗೆ ಚರ್ಚೆಯೇ ನಡೆದಿಲ್ಲ. ಇದೇ ಉತ್ತರ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಗಣಿ ಪ್ರಕರಣ ಬಳಿಕ ಬಿಜೆಪಿ 2011ರಲ್ಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
1999ರ ಲೋಕಸಭಾ ಚುನಾವಣೆಯಲ್ಲಿ ಐಎಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರಿಗೆ ಸ್ಪರ್ಧೆ ನೀಡಲು ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಕಣಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಸುಷ್ಮ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮಲು ಸಹಾಯ ಮಾಡಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಸುಷ್ಮಾ ಬಳ್ಳಾರಿಯ ನಂಟನ್ನು ಬಿಟ್ಟಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ರೆಡ್ಡಿ ಮತ್ತು ಶ್ರೀರಾಮಲು ಆಯೋಜಿಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ. 2000ನೇ ಇಸ್ವಿಯಿಂದ ವರಮಹಾಲಕ್ಷ್ಮಿ ಹಬ್ಬದಂದು ಜನಾರ್ದನ ರೆಡ್ಡಿ, ಶ್ರೀರಾಮಲು ಬಳ್ಳಾರಿ, ಗದಗ್, ಕೊಪ್ಪಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ಆರಂಭಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಷ್ಮಾ ಸ್ವರಾಜ್ ಆಗಮಿಸುತ್ತಿದ್ದರು. ಆದರೆ ರೆಡ್ಡಿ ಜೈಲುಪಾಲಾದ ಬಳಿ ಸುಷ್ಮಾ ಸ್ವರಾಜ್ ಈ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕುತ್ತಿದ್ದಾರೆ. ಒಂದು ಬಾರಿ ರೆಡ್ಡಿ ಮತ್ತು ಶ್ರೀರಾಮಲು ನನ್ನ ಮಕ್ಕಳು ಎಂದಿದ್ದ ಸುಷ್ಮಾ ಸ್ವರಾಜ್ ಸಿಬಿಐ ತನಿಖೆ ಆರಂಭವಾದ ಬಳಿಕ ರೆಡ್ಡಿ ಮತ್ತು ಶ್ರೀರಾಮಲು ಮಧ್ಯೆ ನನಗೆ ಏನು ವಿಶೇಷ ಸಂಬಂಧ ಇಲ್ಲ ಎಂದು ಹೇಳಿದ್ದರು.
1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ದ ಸ್ವರಾಜ್ 56,100 ಮತಗಳ ಅಂತರಿಂದ ಸೋತಿದ್ದರು. ಸೋನಿಯಾ ಗಾಂಧಿ 4,14,650 ಮತಗಳನ್ನು ಪಡೆದಿದ್ದರೆ, ಸುಷ್ಮಾ ಸ್ವರಾಜ್ 3,58,550 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: 2018ರ ಚುನಾವಣೆಗೆ ನಿಲ್ತೀರಾ: ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಉತ್ತರಿಸಿದ್ದು ಹೀಗೆ