ಕಲಬುರಗಿ: ಮುಖ್ಯಮಂತ್ರಿಯಾಗಿ ಅಂತ ಹೈಕಮಾಂಡ್ ಕರೆದು ಹೇಳಿಲ್ಲ. ಇಲ್ಲಿಯ ನಾಯಕರು ಕೂಡ ಸಿಎಂ ಆಗಲು ಹೇಳಲಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕಿತ್ತು ಎನ್ನುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ವಿಚಾರದ ಕುರಿತಾಗಿ ಮಾತಾಡುವುದಿಲ್ಲ. ಕುಮಾರಸ್ವಾಮಿ ಅವರ ಹೇಳಿಕೆಗೆ ಎಲ್ಲರೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಒಂದು ವೇಳೆ ಎಲ್ಲರೂ ತಮ್ಮ, ತಮ್ಮ ವಿಚಾರ ಹೇಳಿಕೊಂಡರೆ ಪಕ್ಷದಲ್ಲಿ ಒಡಕು ಉಂಟಾಗುತ್ತದೆ ಎಂದು ತಿಳಿಸಿದರು.
Advertisement
Advertisement
ನಾವು ಎಲ್ಲರೂ ಸೇರಿ ಹೈಕಮಾಂಡ್ ತೀರ್ಮಾನದಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಮೇ 23ರ ಲೋಕಸಭಾ ಫಲಿತಾಂಶ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡ ಪಕ್ಷಗಳ ನಾಯಕರೊಂದಿಗೆ ಮಾತನಾಡಲಿದ್ದಾರೆ. ಫಲಿತಾಂಶ ಬಂದ ಮೇಲೆ ಸಂಖ್ಯಾ ಬಲ ನೋಡಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಕಾಂಗ್ರೆಸ್‍ನವರೇ ಪ್ರಧಾನಿಯಾಗಬೇಕು ಎಂದು ಈಗಲೇ ಹೇಳಿದರೆ ಬೇರೆಯವರ ನಿಲುವು ಏನಾಗಿರುತ್ತೋ ಅಂತ ನೋಡಬೇಕಿದೆ ಎಂದು ಹೇಳಿದದರು.
Advertisement
Advertisement
ಬಿಜೆಪಿ ಸಂಸದ ನಳಿನ್ ಕಟೀಲ್ ಅವರು ನಾಥುರಾಮ ಗೂಡ್ಸೆ ಕೊಂದಿದ್ದು ಒಬ್ಬರನ್ನು, ಮಾಜಿ ಪ್ರಧಾನಿ ರಾಜೀವ್ ಗಾಂಧಿ 17 ಸಾವಿರ ಜನರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಅವರ ಮನಸ್ಥಿತಿ ನಮಗೆ ಅರ್ಥವಾಗುತ್ತದೆ. ರಾಜೀವ್ ಗಾಂಧಿ ಅವರು ದೇಶದ ಐಕ್ಯತೆಗಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಬಿಜೆಪಿ ನಾಯಕರು ಕೊಲೆ ಮಾಡಿದವರನ್ನು ದೇಶಭಕ್ತರು, ದೇವರು ಎಂದು ಪೂಜಿಸುತ್ತಿದ್ದಾರೆ. ಇನ್ನು ಮುಂದೆಯಾದರೂ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಬೇಕು ಎಂದು ಕಿಡಿಕಾರಿದರು.