ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ವಿರುದ್ಧವೇ ಬಂಡಾಯ ಹಾರಿಸಿ ಆಪರೇಷನ್ ಕಮಲಕ್ಕೆ ಮೂಲ ವ್ಯಕ್ತಿ ಎಂದು ಹೇಳಲಾಗುತ್ತಿದ್ದ ಕುಂದಾ ನಗರಿಯ ಸಾಹುಕಾರ ರಮೇಶ್ ಜಾರಕಿಹೊಳಿ ಈಗ ಯೂ ಟರ್ನ್ ಹೊಡೆದಿದ್ದಾರೆ. ಈ ಮೂಲಕ ಸಂಕ್ರಾಂತಿಯ ಬಳಿಕ ಬಿಜೆಪಿ ಪಥದಲ್ಲಿ ಸಾಗಲು ಮುಂದಾಗಿದ್ದ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಪಥದಲ್ಲೇ ಮುಂದುವರಿಯುವ ಸುಳಿವು ಸಿಕ್ಕಿದೆ.
ಹೌದು, ದೋಸ್ತಿ ಪಕ್ಷವಾದ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ಬಾವುಟ ಹಾರಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೇಡಿಕೆಗಳಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗುತ್ತಿದ್ದಂತೆ ಜಾರಕಿಹೊಳಿ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕಾಂಗ್ರೆಸ್ಸಿನಿಂದ ಬೇಡಿಕೆ ಈಡೇರುತ್ತಿದ್ದಂತೆ ಮುಂಬೈ ಹೋಟೆಲ್ ನಲ್ಲಿದ್ದ ರಮೇಶ್ ಜಾರಕಿಹೊಳಿ ಅವರು ಶೀಘ್ರವೇ ಬೆಂಗಳೂರಿಗೆ ಮರಳಲಿದ್ದಾರೆ.
Advertisement
Advertisement
ಮೈತ್ರಿ ಸರ್ಕಾರದ ಸಂಪುಟ ರಚನೆ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೇ ತೆರಳಿದ್ದ ರಮೇಶ್ ಜಾರಕಿಹೊಳಿ ಅವರು ಕೆಲ ಅಸಮಾಧಾನಿತ ಶಾಸಕರೊಂದಿಗೆ ಮುಂಬೈಗೆ ತೆರಳಿದ್ದರು. ಅಲ್ಲದೇ ಕೆಲ ಶಾಸಕರು ಕೂಡ ಅವರೊಂದಿಗೆ ತೆರಳಿ ಬೆಂಬಲ ನೀಡಿದ್ದರು ಎಂಬ ಸುದ್ದಿಯೂ ಲಭಿಸಿತ್ತು.
Advertisement
ಸದ್ಯ ಕಾಂಗ್ರೆಸ್ ಪಕ್ಷದ ನಾಯಕರು ರಮೇಶ್ ಜಾರಕಿಹೊಳಿ ಅವರ ಮನವೊಲಿಕೆ ಮಾಡಲು ಯಶಸ್ವಿಯಾಗಿದ್ದು, ರಮೇಶ್ ಅವರು ಬಿಜೆಪಿಗೆ ತೆರಳಿದರೆ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎಂದು ತಿಳಿಸಿ ಮನವೊಲಿಕೆಗೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿರೀಕ್ಷೆ ಮಟ್ಟದಲ್ಲಿ ಬಿಜೆಪಿಯಿಂದ ಬೆಂಬಲ ಲಭಿಸದ ಕಾರಣದಿಂದಾಗಿ ರಮೇಶ್ ಜಾರಕಿಹೊಳಿ ಅವರು ಯೂ ಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ.
Advertisement
ರಮೇಶ್ ಜಾರಕಿಹೊಳಿ ಅವರು ತಮ್ಮೊಂದಿಗೆ 9 ಶಾಸಕರನ್ನು ಕರೆದುಕೊಂಡು ಬರುವುದಾಗಿ ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಇದರೊಂದಿಗೆ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದ ಶಾಸಕರು ಕೂಡ ವಾಪಸ್ ಬರುವ ಸಾಧ್ಯತೆ ಇದೆ. ಆಪರೇಷನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿಯ ಮುಂದಿನ ನಡೆ ಏನು ಎನ್ನುವ ಕುತೂಹಲ ಮೂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv