– ಕುಮಾರಸ್ವಾಮಿ ರಾಮನಗರಕ್ಕೆ ತಗೊಂಡು ಹೋಗ್ಬೇಕು ಅಂತ ಕೈಬಿಟ್ರು ಎಂದ ಸಿಎಂ
ಮೈಸೂರು: ಹೈಕ್ಲಾಸ್ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಾಣ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡ್ತಿದ್ದೇವೆ. ಹಿಂದಿಯೇ ಸಿಎಂ ಆಗಿದ್ದಾಗ ಮೈಸೂರಿಗೆ ಘೋಷಣೆ ಮಾಡಿದ್ದೆ. ಕುಮಾರಸ್ವಾಮಿ ಅವರು ರಾಮನಗರಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಅದನ್ನ ಕೈಬಿಟ್ರು. ಫಿಲ್ಮ್ ಸಿಟಿ ಮಾಡೋಕೆ ಜಾಗವನ್ನ ವಾರ್ತಾ ಇಲಾಖೆಗೆ ವರ್ಗಾವಣೆ ಮಾಡಿದ್ದೇವೆ. ವಿಶ್ವದರ್ಜೆಯ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ. ಸರ್ಕಾರ ನಿಮ್ಮ ಜೊತೆ ಇರಲಿದೆ. ನೀವು ಉತ್ತಮ ಚಿತ್ರ ಮಾಡಿ ಎಂದು ಭರವಸೆ ನೀಡಿದರು.
ಚಲನಚಿತ್ರ ಅನ್ನೋದು ಕಲೆಯಲ್ಲಿ ಅದು ನಮ್ಮ ಸಂಸ್ಕೃತಿ. ನಮ್ಮ ಬದುಕಿನ ಸಂಸ್ಕೃತಿ, ನಾಡಿನ, ದೇಶದ, ವಿದೇಶದ ಸಂಸ್ಕೃತಿಯನ್ನ ಜನರಿಗೆ ಪರಿಚಯ ಮಾಡಿಸೋಕೆ ಚಲನಚಿತ್ರೋತ್ಸವ ಮಾಡ್ತಿರೋದು. ಸಿನಿಮಾ ಪ್ರಭಾವಿ ಮಾಧ್ಯಮ. ಸಿನಿಮಾ ಜನ, ಸಮಾಜ ಎದುರಿಸೋ ಸಮಸ್ಯೆಯ ಆಳ ತಿಳಿಸುವ ಕೆಲಸ ಮಾಡುತ್ತದೆ ಎಂದು ಬಣ್ಣಿಸಿದರು.
ಜನರಲ್ಲಿ ಅಸಂತೋಷ, ಅಸಹನೆ, ವೈಷಮ್ಯ ಜಾಸ್ತಿ ಬೆಳೆಯುತ್ತಿದೆ. ಪ್ರೀತಿ ಅಭಿಮಾನಿ ಕಡಿಮೆ ಆಗ್ತಿದೆ. ಹೀಗಾಗಿ ಅಶಾಂತಿ ಉಂಟಾಗ್ತಿದೆ. ದೇಶದಲ್ಲಿ ಸಂಪತ್ತು ಸರಿಯಾಗಿ ಹಂಚಿಕೆ ಆಗಿಲ್ಲ. ದೇಶದಲ್ಲಿ 1% ಜನರಲ್ಲಿ 50% ಸಂಪತ್ತು ಇದೆ. ಇದರಿಂದ ದ್ವೇಷ, ಹಿಂಸೆ, ಅಸೂಯೆ ಜಾಸ್ತಿ ಆಗ್ತಿದೆ. ಅದಕ್ಕಾಗಿ ಸರ್ವ ಜನಾಂಗದ ಶಾಂತಿಯ ತೋಟ ಅಂತ ಥೀಮ್ ಇಟ್ಟಿದ್ದೇವೆ. ರಾಜ್‌ಕುಮಾರ್ ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ಹೋಗುತ್ತಿತ್ತು. ಈಗ ಅಂತಹ ಸಿನಿಮಾ ಕಡಿಮೆ ಅಗ್ತಿದೆ ಎಂದರು.
ಸಂವಿಧಾನ ಜಾತಿರಹಿತ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಇರಬೇಕು. ಅಸಮಾನತೆ ಹೋಗಬೇಕು ಅಂತ ಹೇಳಿದೆ. ಆದರೆ ಇಂದಿಗೂ ಅಸಮಾನತೆ ಸಮಾಜದಲ್ಲಿ ಹೋಗಿಲ್ಲ. ಅಸಮಾನತೆ ಹೋಗಬೇಕು ಅಂತ ಅಂಬೇಡ್ಕರ್ ಹೇಳಿದ್ರು. ಆರ್ಥಿಕವಾಗಿ, ಸಾಮಾಜಿಕವಾಗಿ ಜನ ಸಬಲರಾಗಬೇಕು. ಇಂತಹ ಸಿನಿಮಾ ಮಾಡಬೇಕು. ಮೌಢ್ಯಗಳು ಬಿತ್ತೋ ಚಿತ್ರ ಯಾರು ಮಾಡಬಾರದು. ವಿದ್ಯಾವಂತರು ಕರ್ಮ ಸಿದ್ಧಾಂತ ನಂಬುತ್ತಾರೆ. ಕರ್ಮ ಸಿದ್ಧಾಂತ ಹೋಗಲಾಡಿಸಬೇಕು. ಇವತ್ತು ತಂತ್ರಜ್ಞಾನ ಬೆಳದಿದೆ. ಎಐ ಪ್ರಾರಂಭ ಆಗಿದೆ. ಇದೆಲ್ಲವನ್ನೂ ಬಳಸಿಕೊಳ್ಳಬೇಕು. ಕನ್ನಡ ಸಿನಿಮಾದಲ್ಲಿ ಸಮಾಜ, ಬದುಕು ಪ್ರತಿಬಿಂಬಿಸಲು ಪರಿಹಾರ ಕೊಡುವ ಕೆಲಸ ಆಗ್ತಿಲ್ಲ. ಕರ್ನಾಟಕದಲ್ಲಿ ಎಲ್ಲವೂ ಇದೆ. ಬೆಂಗಳೂರು ಒಂದು ಜಗತ್ತು. ಎಲ್ಲಾ ಸೌಕರ್ಯಗಳು ಇವೆ. ತಂತ್ರಜ್ಞಾನ ಬಳಸಿಕೊಂಡು ಚಿತ್ರ ಮಾಡಿ. ಸಮಾಜ ಬದಲಾವಣೆ ಮಾಡೋ ಚಿತ್ರ ಮಾಡಲಿ ಎಂದು ಸಲಹೆ ನೀಡಿದರು.