ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಕೊರೊನಾ (Corona Virus) ನಿಯಂತ್ರಣಕ್ಕೆ ತಜ್ಞರ ಸಲಹೆಯ ಬೆನ್ನಲ್ಲೇ ಶಿಕ್ಷಣ ಇಲಾಖೆ (Education Department) ಯೂ ಅಲರ್ಟ್ ಆಗಿದೆ. ಶಾಲಾ-ಕಾಲೇಜುಗಳ ಕೊರೊನಾ ಕಂಟ್ರೋಲ್ ಗೆ ನಿಯಮ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿಯೊಂದು ಲಭಿಸಿದೆ.
1, 2 ಮತ್ತು 3 ನೇ ಅಲೆಯ ವೇಳೆ ತೆಗೆದುಕೊಂಡಿದ್ದ ಮುಂಜಾಗ್ರತಾ ಕ್ರಮಗಳನ್ನೇ ಮತ್ತೆ ಜಾರಿ ಮಾಡಲು ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಮಾರ್ಗಸೂಚಿ ಪಾಲನೆ ಮಾನಿಟರ್ ಮಾಡಲು ಬಿಇಓ, ಡಿಡಿಪಿಐ, ಡಿಡಿಪಿಯುಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ. ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಕೊರೊನಾ ನಿಯಮ ಪಾಲನೆ ಆಗಬೇಕು ಅಂತ ಸೂಚನೆ ನೀಡಲಾಗುತ್ತೆ.
ಶಿಕ್ಷಣ ಇಲಾಖೆ ಮಾರ್ಗಸೂಚಿ ಏನು?: ಶಾಲಾ-ಕಾಲೇಜುಗಳ ಆವರಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಕ್ರಮವಹಿಸಬೇಕು. ಅಲ್ಲದೆ ಕಡ್ಡಾಯವಾಗಿ ಸ್ಯಾನಿಟೈಸರ್ (Sanitizer) ಬಳಕೆ ಕೂಡ ಮಾಡಬೇಕು. ಶಾಲಾ-ಕಾಲೇಜುಗಳ ಆವರಣಕ್ಕೆ ಸಾರ್ವಜನಿಕರು, ಪೋಷಕರಿಗೆ ನಿಷೇಧ ಹಾಕಬೇಕು. ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿರಬೇಕು. ಜೊತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು.
ಅಡುಗೆ ಸಿಬ್ಬಂದಿ, ಸಹಾಯಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿರಬೇಕು. ಜೊತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು. ಬಿಸಿಯೂಟ ಮಾಡುವಾಗ ಅಡುಗೆ ಸಿಬ್ಬಂದಿ ಶುಚಿತ್ವ ಕಾಪಾಡಲು ಕ್ರಮವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಬರೋವಾಗ, ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದ್ರೆ ಕ್ವಾರಂಟೈನ್
ಪ್ರಾರ್ಥನೆ, ಊಟದ ಸಮಯ, ತರಗತಿ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರ ವರ್ಗಗಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಅವಕಾಶ ಕೊಡಬಾರದು. ಶಾಲಾ-ಕಾಲೇಜುಗಳ ಸೋಂಕು ಕಂಡು ಬಂದರೆ ತರಗತಿಯ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಬೇಕು.
ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲೆ ಆವರಣ, ಕೊಠಡಿಗಳಲ್ಲಿ ಶುಚಿತ್ವ ಕಾಪಾಡಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ (Vaccine) ಹಾಕಿಸಲು ಶಾಲಾ ಹಂತದಲ್ಲಿ ಕ್ರಮವಹಿಸಬೇಕು.