ಮೈಸೂರು: ಸರ್ಕಾರಿ ಖರಾಬು ಜಾಗದಲ್ಲಿ ವ್ಯಕ್ತಿಯೊಬ್ಬ ಹೈಟೆಕ್ ಪೌಲ್ಟ್ರಿ (Poultry) ಫಾರಂ ನಿರ್ಮಿಸಿದ್ದಾನೆ. ಪ್ರಕರಣ ಬೆಳಕಿಗೆ ಬಂದು 2 ವರ್ಷ ಕಳೆದರೂ ಅಧಿಕಾರಿಗಳು ಜಾಗ ವಶಪಡಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒತ್ತುವರಿ ತೆರುವುಗೊಳಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಪತ್ರ ಬರೆದಿದ್ದರೂ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ವೆ ನಂ.193 ರ ಎರಡು ಎಕರೆ ಜಮೀನು ಸರ್ಕಾರಿ ಖರಾಬು ಗೋಮಾಳವಾಗಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ ಎಫೆಕ್ಟ್; ಪ್ರಯಾಣಿಕರ ಸಂಖ್ಯೆ ಇಳಿಕೆ – ಬಸ್ ಸಂಚಾರ ಇದ್ರೂ ಪ್ರಯಾಣಿಕರಿಲ್ಲ
ಈ ಜಮೀನಿಗೆ ಮಂಡ್ಯ ಮೂಲದ ವ್ಯಕ್ತಿ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿ ಹೈಟೆಕ್ ಪೌಲ್ಟ್ರಿ ಫಾರಂ, ಮೂರು ವಾಸದ ಮನೆ ಒಂದು ವಾಟರ್ ಟ್ಯಾಂಕ್ ನಿರ್ಮಾಣ ಮಾಡಿದ್ದಾನೆ. ಒತ್ತುವರಿ ಸ್ಥಳ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಂದ ತಾಲೂಕು ಆಡಳಿತಕ್ಕೆ ಸೂಚನೆ ಬಂದಿದೆ. ಆದರೂ, ತಮ್ಮ ಆಸ್ತಿಯನ್ನ ರಕ್ಷಿಸಿಕೊಳ್ಳಲು ನಂಜನಗೂಡು ತಾಲೂಕು ಆಡಳಿತ ಆಸಕ್ತಿ ತೋರಿಸುತ್ತಿಲ್ಲ. ಯಾವುದೇ ಕ್ರಮವೂ ಕೈಗೊಂಡಿಲ್ಲ. ತಾಲೂಕು ಆಡಳಿತದ ನಡೆ ಹಿಂದೆ ಬಾರಿ ಅನುಮಾನ ಮೂಡಿದೆ.

