ಉಡುಪಿ: ತಂತ್ರಜ್ಞಾನ ಬೆಳೆದಂತೆ ಕೃಷಿ-ಬೇಸಾಯ ನಾಶವಾಗಿ ಹೋಯ್ತು ಅನ್ನೋ ವಾದವೊಂದಿದೆ. ಜನ ಬೇಸಾಯ ಮಾಡೋದನ್ನು ಬಿಟ್ಟೇ ಬಿಟ್ಟರು ಅಂತಾರೆ. ಆದ್ರೆ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಕಾಲಿಟ್ಮೇಲೆ ಜನಕ್ಕೆ ಬೇಸಾಯದ ಮೇಲೆ ಮತ್ತೆ ಮನಸ್ಸಾಗಿದೆ.
ಬೇಸಾಯ ಮಾಡೋದಕ್ಕೆ ಆಳುಗಳೇ ಸಿಗಲ್ಲ. ಕೆಲಸದಾಳು ಸಿಕ್ಕರೂ ಅವರಿಗೆ ಸಂಬಳ ಕೊಟ್ಟು ಪೂರೈಸಲ್ಲ. ಸಂಬಳ-ಖರ್ಚು ವೆಚ್ಚ ಕಳೆದ್ರೆ ನಮಗೇನೂ ಉಳಿಯಲ್ಲ. ಕರಾವಳಿಯಲ್ಲಿ ಬೇಸಾಯ ಮಾಡುವ ಮಂದಿಯ ಬಾಯಲ್ಲಿ ಬರುವ ಮಾತುಗಳಿವು. ಈ ಎಲ್ಲಾ ಕಾರಣಕ್ಕಾಗಿ ಜನ ಕೃಷಿ ಮಾಡೋದನ್ನೇ ಬಿಟ್ಟು ಬಿಟ್ಟಿದ್ದಾರೆ. ಆದರೆ ಇದೀಗ ಹೊಸ ತಂತ್ರಜ್ಞಾನ ಗದ್ದೆಗೆ ಇಳಿದಿರೋದ್ರಿಂದ ಮತ್ತೆ ಬೇಸಾಯ ಮಾಡೋ ಮನಸ್ಸು ರೈತರಿಗಾಗಿದೆ. ಜಪಾನ್ ದೇಶದ ನಾಟಿ ಮಾಡುವ ಅತ್ಯಾಧುನಿಕ ಯಂತ್ರ ಕರಾವಳಿ ಜಿಲ್ಲೆ ಉಡುಪಿಗೆ ಕಾಲಿಟ್ಟಿದೆ.
Advertisement
Advertisement
ಹಿರಿಯಡ್ಕದ ಆನಂದ ಶೆಟ್ಟಿ ಅವರು ಈ ಬಾಡಿಗೆ ಯಂತ್ರವನ್ನು ಪಡೆದು ಸಸಿ ನೆಡುತ್ತಿದ್ದಾರೆ. ಮನುಷ್ಯ ಶಕ್ತಿಯಿಂದ ಉಳುಮೆ ಮಾಡೋದು-ನಾಟಿ ಮಾಡೋದು ಕಷ್ಟ. ಆದ್ರೆ ಈ ಯಂತ್ರ ಉತ್ತು-ನಾಟಿ ಮಾಡುತ್ತದೆ. ಕೃಷಿ ಏನಾದ್ರು ಮುಂದಿನ ದಿನಗಳಲ್ಲಿ ಉಳಿದ್ರೆ ಇಂತಹ ಯಂತ್ರಗಳಿಂದ ಮಾತ್ರ. ಈಗಿನ ಯುವಕರು ಇಂತಹ ತಂತ್ರಜ್ಞಾನ ನೋಡಿದ್ರೆ ಮತ್ತೆ ಕೃಷಿಯತ್ತ ಮುಖ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಅವರು ಹೇಳುತ್ತಾರೆ.
Advertisement
ದಿನವೊಂದಕ್ಕೆ ಕಡಿಮೆ ಅಂದ್ರೂ ಏಳೆಂಟು ಎಕರೆ ಜಮೀನಿನಲ್ಲಿ ನಾಟಿ ಕಾರ್ಯ ಮಾಡುವ ಸಾಮಥ್ರ್ಯವನ್ನು ಈ ಯಂತ್ರ ಹೊಂದಿದೆ. ಮನುಷ್ಯ ನೆಡುವುದಕ್ಕಿಂತ ಚೆನ್ನಾಗಿ ಪೈರನ್ನು ನಾಟಿ ಮಾಡುತ್ತದೆ. ಈ ಹಿಂದೆ ಬಂದ ಎಲ್ಲಾ ಮಷೀನ್‍ಗಳಿಗಿಂತ ಜಪಾನ್ ಮಷೀನ್ ನಡುವೆ ಅಂತರಗಳಿಲ್ಲದೆ ನಾಟಿ ಮಾಡುತ್ತದೆ. ನಾಟಿ ಯಂತ್ರದಲ್ಲೇ ಪೈರನ್ನು ಇಡೋದಕ್ಕೆ ಸ್ಥಳಾವಕಾಶ ಕೂಡಾ ಇದೆ.
Advertisement
ಈ ಹೊಸ ಮಷೀನ್ ಬಂದಿರೋದ್ರಿಂದ ಉಡುಪಿಯ ಹಿರಿಯಡ್ಕದ ಯುವಕರೆಲ್ಲಾ ಸೇರಿ ನೂರು ಎಕ್ರೆ ಪಾಳುಬಿದ್ದ ಗದ್ದೆಯಲ್ಲಿ ಕೃಷಿ ಮಾಡೋದಕ್ಕೆ ಹೊರಟಿದ್ದಾರೆ. ಬಂದ ಆದಾಯವನ್ನು ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆ ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ದೇವಸ್ಥಾನ ಈ ಬಾರಿ ಜೀರ್ಣೋದ್ಧಾರ ಆಗಿದ್ದು ಕೊಯ್ಲು ಆಗುವ ಸಂದರ್ಭ ಬಂದ ಲಾಭಾಂಶದಲ್ಲಿ ಮುಂದಿನ ಬೆಳೆ ಮಾಡಲು ಹಣವನ್ನು ತೆಗೆದಿಟ್ಟು ಎಲ್ಲವನ್ನೂ ದೇವರಿಗೆ ಒಪ್ಪಿಸುವ ಹರಕೆಯನ್ನು ಹೇಳಿ ಉಳುಮೆ ಮಾಡಿಸಲಾಗಿದೆ.
ತಂತ್ರಜ್ಞಾನ ಬಂದಮೇಲೆ ಜನ ಬೇಸಾಯ ಮರೆತ್ರು ಅನ್ನೋ ದೂರಿತ್ತು. ಆದ್ರೆ ಇದು ಆ ದೂರಿಗೊಂದು ಅಪವಾದ. ಕೃಷಿ ಕ್ಷೇತ್ರದಲ್ಲಿದು ಉತ್ತಮ ಬೆಳವಣಿಗೆ ಇಂತಹ ಬೆಳವಣಿಗೆ ಮತ್ತಷ್ಟು ಆದ್ರೆ ಒಳ್ಳೇದು.