Bengaluru CityDistrictsKarnatakaLatestMain Post

ಮೋದಿ ಹುಟ್ಟುಹಬ್ಬ – ಬೆಂಗಳೂರಿನಲ್ಲಿ ವಿಶಿಷ್ಟ ಸರ್ಕಾರಿ ಆಸ್ಪತ್ರೆ ಲೋಕಾರ್ಪಣೆ

ಬೆಂಗಳೂರು: ಸೂಕ್ತ ತಪಾಸಣೆ, ಪ್ರಯೋಗಾಲಯ, ಚಿಕಿತ್ಸೆ ಮತ್ತು ಔಷಧಿಗಳು ಉಚಿತವಾಗಿ ಇಲ್ಲವೇ ಕೈಗೆಟುಕುವ ದರದಲ್ಲಿ ಒಂದೇ ಕಡೆ ಲಭ್ಯವಾಗುವಂತಹ ‘ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ವು (ಸಿಯುಪಿಎಚ್‌ಸಿ) ಮಲ್ಲೇಶ್ವರಂ(Malleswaram) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಇಡೀ ದೇಶದಲ್ಲೇ ವಿನೂತನವಾಗಿರುವ ಈ ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆಯನ್ನು(Hospital) ಪ್ರಧಾನಿ ನರೇಂದ್ರ ಮೋದಿಯವರ(Narenndra Modi) 72ನೇ ಹುಟ್ಟುಹಬ್ಬವಾದ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಉದ್ಘಾಟಿಸಿದ್ದಾರೆ.

ನಗರದಲ್ಲಿ ಪ್ರಪ್ರಥಮವಾಗಿ ಬಿಬಿಎಂಪಿ(BBMP) ಮತ್ತು ಮಣಿಪಾಲ್(Manipal) ಹೆಲ್ತ್ ಎಂಟರ್‌ಪ್ರೈಸ್ ಸಹಯೋಗದಲ್ಲಿ ಈ ವಿನೂತನ ಮತ್ತು ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಹಲವು ಸಾರ್ವಜನಿಕರು ಕೂಡ ದೇಣಿಗೆ ನೀಡಿದ್ದಾರೆ. ಇಲ್ಲಿ ಪ್ರಯೋಗಾಲಯ, ಡಿಜಿಟಲ್ ಎಕ್ಸ್‌ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಪಿಎಫ್‌ಟಿ ಮತ್ತು ಇಸಿಜಿ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಹ ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ತುರ್ತು ಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಪ್ರಧಾನಮಂತ್ರಿಗಳ ಜನೌಷಧ ಕೇಂದ್ರ ಎಲ್ಲವೂ ಇಲ್ಲಿ ಲಭ್ಯವಿರಲಿದ್ದು, ಒಳರೋಗಿಗಳ ವಿಭಾಗವೂ ಇದೆ. ಅಲ್ಲದೆ ಆಸ್ಪತ್ರೆಯಲ್ಲಿ ಇಎಂಆರ್ (ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್) ವ್ಯವಸ್ಥೆಯೂ ಇದೆ.

ಇಂತಹ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಲ್ಲೇಶ್ವರಂ ಕ್ಷೇತ್ರದ ನಾಗಪ್ಪ ಬ್ಲಾಕ್, ಗಾಂಧಿ ಗ್ರಾಮ, ಯಶವಂತಪುರ ಮತ್ತು ಮತ್ತೀಕೆರೆಗಳಲ್ಲಿ ಕೂಡ ಆಸ್ಪತ್ರೆಗಳನ್ನು ಹೀಗೆಯೇ ನವೀಕರಿಸಲಾಗಿದ್ದು, ಇವು ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ಈ ಆಸ್ಪತ್ರೆಗಳಿಗೆ ನಗರೋತ್ಥಾನ ಯೋಜನೆಯಡಿ ತಲಾ 1.50 ಕೋಟಿ ರೂ. ಕೊಡಲಾಗುತ್ತಿದೆ. ಉಳಿದ ಎರಡು ವಾರ್ಡುಗಳಲ್ಲೂ ಇಂತಹ ಸಿಯುಪಿಎಚ್‌ಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನೂ ಓದಿ: ಸಂಘ ಪರಿವಾರದಿಂದಾಗಿ ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿಗೆ ಹಿನ್ನಡೆ: ಕೇರಳ ಸಿಎಂ

ಈ ಆಸ್ಪತ್ರೆಗೆ ಬರುವವರಿಗೆ ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ವೈದ್ಯಕೀಯ ಗ್ಯಾಸ್‌ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಸೌಲಭ್ಯವನ್ನೂ ಅಳವಡಿಸಿಕೊಳ್ಳಲಾಗಿದೆ. ಹಾಗೆಯೇ ಪರಿಣತ ವೈದ್ಯರು ಹೊರರೋಗಿಗಳ ವಿಭಾಗದಲ್ಲಿ ನೆರವು ನೀಡಲಿದ್ದಾರೆ. ಬಿಬಿಎಂಪಿ ಮತ್ತು ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಗಳಡಿ ಈ ಆಸ್ಪತ್ರೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬ ವೈದ್ಯರು ರಜೆಯ ಮೇಲಿದ್ದಾಗ ಮತ್ತೊಬ್ಬ ವೈದ್ಯರು ಕರ್ತವ್ಯದ ಮೇಲಿರುತ್ತಾರೆ. ಯುನೈಟೆಡ್ ವೇ ಎನ್ನುವ ಕಂಪನಿಯವರು ಈ ಆಸ್ಪತ್ರೆಗೆ ಬೇಕಾದ ಉಪಕರಣಗಳನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳೆಂದರೆ ಜನರಲ್ಲಿ ಒಳ್ಳೆಯ ಭಾವನೆ ಇಲ್ಲ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಕೈಗೆಟುಕುತ್ತಿಲ್ಲ. ಇದನ್ನು ಮನಗಂಡು, ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಪುನಃ ವಿಶ್ವಾಸ ಮೂಡಿಸುವಂತಹ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಗರಿಷ್ಠ 150 ಜನರಿಗೆ ಚಿಕಿತ್ಸೆ ಕೊಡಬಹುದು. ಇಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಮಣಿಪಾಲ್ ಸಮೂಹದ ಆಸ್ಪತ್ರೆಗಳ ಮೂಲಕ ಸರಕಾರಿ ದರದಲ್ಲಿ ಕೊಡಲಾಗುವುದು. ಈ ಸಂಬಂಧ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಬೆಂಗಳೂರು ನಗರದ ಜನಸಂಖ್ಯೆ 1.3 ಕೋಟಿಯಷ್ಟಿದೆ. ಹೀಗಿರುವಾಗ ಪ್ರತೀ 2-3 ಲಕ್ಷ ಜನರಿಗೆ ಒಂದಂತೆಯಾದರೂ ಇಂತಹ ಸಿಯುಪಿಎಚ್‌ಸಿ ಅಗತ್ಯವಿದೆ. ಇದನ್ನು ಪರಿಗಣಿಸಿ ಇಂತಹ ಮೊಟ್ಟಮೊದಲ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಪೊರೇಟ್‌ ವಲಯವನ್ನೂ ಸೇರಿಸಿಕೊಳ್ಳಲಾಗಿದ್ದು, ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ರಾಷ್ಟ್ರೀಯ ಮಟ್ಟದ ಎಲ್ಲ ಆರೋಗ್ಯ ಕಾರ್ಯಕ್ರಮಗಳ ವ್ಯಾಪ್ತಿಯಲ್ಲಿನ ಸೇವೆಗಳೂ ಸುಲಭವಾಗಿ ಸಿಗುತ್ತವೆ.

ದಂತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಡಿಜಿಟಲ್‌ ಎಕ್ಸ್‌ರೇ, ಪ್ರಯೋಗಾಲಯಗಳು, ಮಲ, ಮೂತ್ರ, ರಕ್ತ ಮತ್ತು ಕಫ ಪರೀಕ್ಷೆ, ಪಿಎಫ್‌ಟಿ ಪರೀಕ್ಷೆ ಫಿಸಿಯೋಥೆರಪಿ, ತುರ್ತು ಚಿಕಿತ್ಸಾ ಸೌಲಭ್ಯ, ಹೊರರೋಗಿಗಳ ವಿಭಾಗ, ಒಳರೋಗಿಗಳ ವಿಭಾಗ, ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್, ಇಸಿಜಿ, ವೈದ್ಯಕೀಯ ಪೈಪ್‌ಲೈನ್‌ ಸಹಿತ ಆಕ್ಸಿಜನ್ ಜನರೇಟರ್ ಮತ್ತು ಜನೌಷಧಿ ಕೇಂದ್ರ ಹಾಗೂ ತಜ್ಞ ವೈದ್ಯರ ಲಭ್ಯತೆ. ಮಲ್ಲೇಶ್ವರಂ ಶಾಸಕ , ಸಚಿವರೂ ಆದ ಡಾ.ಸಿಎನ್ ಅಶ್ವಥನಾರಾಯಣ್ ಅವರ ಒತ್ತಾಸೆ, ಕಾಳಜಿಯಿಂದ ಈ ಯೋಜನೆ ಜಾರಿಗೆ ಬಂದಿದೆ.

Live Tv

Leave a Reply

Your email address will not be published.

Back to top button