ಹೇ ಸಾಗರವೇ ನಿನಗೆ ನನ್ನ ವಂದನೆ: ಸ್ವರಚಿತ ಕವನ ಹಂಚಿಕೊಂಡ ಮೋದಿ

Public TV
2 Min Read
Modi A

ನವದೆಹಲಿ: ‘ಹೇ ಸಾಗರವೇ ನಿನಗೆ ನನ್ನ ವಂದನೆ’ ಎಂಬ ಸ್ವರಚಿತ ಕವನನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಅನೌಪಚಾರಿಕ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ಶುಕ್ರವಾರ ಹಾಗೂ ಶನಿವಾರ ವಾಸ್ತವ್ಯ ಹೂಡಿದ್ದರು. ಮೊದಲ ದಿನ ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮವಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೇ ಕಲ್ಲಿನಲ್ಲಿ ಕೆತ್ತಿದ ಪಂಚರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.

Modi

ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಬಂಡೆಯ ಮೇಲೆ ಕುಳಿತು ಸಮುದ್ರ ಅಲೆಗಳ ಆಟ, ಅಲ್ಲಿನ ಸೊಬಗನ್ನು ಸವಿದಿದ್ದರು. ಈ ಸನ್ನಿವೇಶವನ್ನು ಮೋದಿ ಕವನದ ಮೂಲಕ ವಿವರಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಮಾತೃ ಭಾಷೆ ಗುಜರಾತಿಯಲ್ಲಿ ಕವನ ಬರೆಯಲು ಇಷ್ಟಪಡುತ್ತಾರೆ. ಜೊತೆಗೆ ಮನದ ಮಾತನ್ನು ಕವನ ರೂಪದಲ್ಲಿ ಹಿಂದಿ ಭಾಷೆಯಲ್ಲಿಯೂ ಬರೆಯುತ್ತಾರೆ. 2018ರಲ್ಲಿ ಅವರು ‘ರಾಮತಾ ರಾಮ್ ಅಕೇಲ್’ ಶೀರ್ಷಿಕೆ ಅಡಿ ಗುಜರಾತಿ ಭಾಷೆಯ ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮಾಮಲ್ಲಪುರಂ ಸಮುದ್ರ ಬಂಡೆಯ ಮೇಲೆ ಕುಳಿತು ಸ್ವಲ್ಪ ಕಾಲ ಪ್ರಧಾನಿ ಕಳೆದ ಮೋದಿ, ಬೀಚ್‍ನಲ್ಲಿ ಹೆಜ್ಜೆ ಹಾಕಿದ್ದರು. ಈ ವೇಳೆ ಅಲ್ಲಿಯೇ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದರು. ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಢ ದೇಹ, ಆರೋಗ್ಯವನ್ನು ಪಡೆಯೋಣ ಎಂದು ಕರೆಕೊಟ್ಟಿದ್ದರು.

ಆದರೆ ಈ ಕುರಿತು ವ್ಯಂಗ್ಯವಾಡಿದ್ದ ತಮಿಳುನಾಡು ಕಾಂಗ್ರೆಸ್, ಇದೊಂದು ಮೋದಿ ನಾಟಕ. ಭಾರತ ಮತ್ತು ಚೀನಾ ಅನೌಪಚಾರಿಕ ಶೃಂಗಸಭೆ ಉದ್ದೇಶದಿಂದ ಬೀಚ್‍ನಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಲಾಗಿತ್ತು ಎಂದಿತ್ತು. ಆದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ನೆಟ್ಟಿಗರು ಪ್ರಧಾನಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *