ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರದ ತುಂಡಿನ ಮೇಲೆ ಹೈ ಟೆನ್ಶನ್ ಕೇಬಲ್ ಅಳವಡಿಕೆ ಮಾಡಿದ್ದು ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವಂತಾಗಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂದರೆ ಮಳೆಗಾಲದಲ್ಲಿ ಕಟ್ಟಿಗೆಗೆ ಆಧಾರವಾಗಿ ಅಳವಡಿಸಿರುವ ವಿದ್ಯುತ್ ತಂತಿಗಳು ಗಾಳಿಗೆ ಯಾರ ಮೇಲಾದರೂ ಬಿದ್ದರೆ ಪ್ರಾಣ ಪಕ್ಷಿಯೇ ಹಾರಿ ಹೋಗುತ್ತೆ ಎಂಬ ಅರಿವು ಇಲ್ಲದಂತಾಗಿದೆ. ಕಳೆದ ಹಲವು ತಿಂಗಳಿನಿಂದ ಕರೋಶಿ ಗ್ರಾಮದ ಅನೇಕ ಕಡೆಗಳಲ್ಲಿ ಹೀಗೆ ವಿದ್ಯುತ್ ತಂತಿಗಳನ್ನು ಕಟ್ಟಿಗೆಗೆ ಆಧಾರವಾಗಿ ನಿಲ್ಲಿಸಿದ್ದಾರೆ. ಅದರಲ್ಲೂ ರಸ್ತೆ ಬದಿಯಲ್ಲಿಯೂ ವಿದ್ಯುತ್ ಕಂಬಗಳನ್ನು ಅಳವಡಿಸದೇ ಮರದ ತುಂಡುಗಳ ಮೇಲೆ ತಂತಿಗಳನ್ನು ಹರಿಸಲಾಗಿದೆ. ಒಂದು ವೇಳೆ ಈ ತಂತಿಗಳು ಮಳೆಗಾಳಿಗೆ ಹರಿದು ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಅಧಿಕಾರಿಗಳದ್ದೇ ನೇರ ಹೊಣೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಹುತೇಕ ಹಳ್ಳಿಗಳಲ್ಲಿ ಇಂಥ ಪರಿಸ್ಥಿತಿ ತುಂಬಾ ಇದೆ. ಹೈ ಟೆನ್ಶನ್ ತಂತಿಗಳನ್ನ ಅಳವಡಿಸಲು ವಿದ್ಯುತ್ ಕಂಬಗಳನ್ನು ಬಳಸದೇ ಹೀಗೆ ಕಟ್ಟಿಗೆ ಮೇಲೆಯೇ ವಿದ್ಯುತ್ ತಂತಿಗಳನ್ನು ಜೋತು ಬಿಟ್ಟಿದ್ದಾರೆ. ಇನ್ನೂ ಕೆಲವು ಕಡೆಗಳಂತೂ ವಿದ್ಯುತ್ ತಂತಿಗಳ ಮೇಲೆ ಕಲ್ಲುಗಳನ್ನು ಹಗ್ಗಗಳಿಗೆ ಕಟ್ಟಿ ತಂತಿಗಳು ಒಂದಕ್ಕೊಂದು ಕೂಡದಂತೆ ಅವೈಜ್ಞಾನಿಕ ರೀತಿಯನ್ನು ಹೆಸ್ಕಾಂ ಅಧಿಕಾರಿಗಳು ಅನುಸರಿಸಿದ್ದಾರೆ. ಕರೋಶಿ ಗ್ರಾಮದಲ್ಲಿರುವ ವಿದ್ಯುತ್ ಕಂಬಗಳ ಪರಿಸ್ಥಿತಿಯಂತೂ ಹೇಳತಿರದಂತಿದೆ. ಇಂದು ಬೀಳುತ್ತವೆ, ನಾಳೆ ಬೀಳುತ್ತವೆ ಎಂಬ ಭಯದಲ್ಲಿ ಜನರು ಕಾಲ ಕಳೆಯುವಂತ ಪರಿಸ್ಥಿತಿ ಇದೆ.
ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದು ಮೂವರು ಪ್ರಾಣ ಕಳೆದುಕೊಂಡಿರುವ ಉದಾಹರಣೆ ಕಣ್ಣು ಮುಂದೆ ಇದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಎಂಜಿನಿಯರ್ ಶ್ರೀಕಾಂತ್, ಈಗಾಗಲೇ ಸೆಕ್ಷನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇನ್ನೊಂದು ವಾರದೊಳಗೆ ಸರಿ ಮಾಡಿಸುತ್ತೇವೆಂದು ಭರವಸೆ ನೀಡಿದ್ದಾರೆ.