ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯಲ್ಲಿ ಮಳೆಗೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಮಾಡಿದ್ದಾರೆ.
ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ ಬೃಹತ್ ಗಾತ್ರದ ಮಾವಿನ ಮರ ಬಿದ್ದು ವಿದ್ಯುತ್ ಲೈನ್ ತುಂಡಾಗಿ ಕಾಳಿ ನದಿ ನೀರಿಗೆ ಬಿದ್ದಿತ್ತು. ಇದರಿಂದಾಗಿ ಈ ಭಾಗದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಹೆಸ್ಕಾಂ ಸಿಬ್ಬಂದಿ, 11 ಕೆ.ವಿ. ಪ್ರಾಜೆಕ್ಟ್ 1 ಮತ್ತು 2 ಹಾಗೂ ಕಾಳಿ ಮಾರ್ಗದ ವಿದ್ಯುತ್ ಲೈನ್ ದುರಸ್ತಿ ಕಾರ್ಯಕ್ಕೆ ಕೈ ಹಾಕಿದರು. ಆದರೆ, ನದಿಯಲ್ಲಿ ಬಿದ್ದ ವಿದ್ಯುತ್ ಲೈನ್‌ಗಳನ್ನು ತೆಗೆದು ಸರಿಪಡಿಸಲು ಬೋಟ್ ವ್ಯವಸ್ಥೆ ಇಲ್ಲದೇ ಕಷ್ಟವಾಗಿತ್ತು. ಈ ನದಿಯಲ್ಲಿ ಮೊಸಳೆಗಳು ಹೆಚ್ಚಿದ್ದು, ದಾಳಿ ನಡೆಸುವ ಸಾಧ್ಯತೆಗಳಿತ್ತು.
ಆದರೆ, ಹೆಸ್ಕಾಂ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ವಿದ್ಯುತ್ ಲೈನ್ ಸರಿಪಡುಸಲು ಮುಂದಾದರು. ಇದಕ್ಕಾಗಿ ಸಂತೋಷ್ ಎಂಬವರು ರಿವರ್ ರಾಪ್ಟಿಂಗ್ ಬೋಟ್ ವ್ಯವಸ್ಥೆ ಮಾಡಿಕೊಟ್ಟರು. ಎರಡು ದಿನ ಕಾಳಿ ನದಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ವಿದ್ಯುತ್ ತಂತಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ದಾಂಡೇಲಿಯ ಅಂಬಿಕಾ ನಗರ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ.