ಬೆಂಗಳೂರು: ಕಳೆದ ಐದು ದಿನಗಳಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕೈ ಉತ್ಪನ್ನಗಳನ್ನ ತೆರಿಗೆಯಿಂದ ಮುಕ್ತಗೂಳಿಸಬೇಕು ಅಂತ ನಗರದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಇದೀಗ ಈ ಸತ್ಯಾಗ್ರಹಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಕೈ ಜೋಡಿಸಿದ್ದಾರೆ.
ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಜಿಎಸ್‍ಟಿ ಅನ್ನೋದು ನಿಜವಾದ ಗ್ರಾಮೀಣ ಪ್ರದೇಶದಲ್ಲಿ ಸರಿಯಲ್ಲ. ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಯಾಕಂದ್ರೆ ಗ್ರಾಮೀಣ ಭಾಗದಲ್ಲಿ ಸಮಾನ ಅದಾಯ ಇರುವುದಿಲ್ಲ. ಹಲವು ಸರ್ಕಾರಗಳು ಗ್ರಾಮೀಣ ಭಾಗದ ಜನರನ್ನು, ಬುಡಕಟ್ಟು ಜನರನ್ನು, ಅದಿವಾಸಿಗಳನ್ನು ಕಡೆಗಣಿಸುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಜಿಎಸ್‍ಟಿಯಿಂದ ವಿನಾಯಿತಿಯನ್ನು ನೀಡಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶವಿರುವ ಭಾರತ ದೇಶದಲ್ಲಿ ಎಷ್ಟರಮಟ್ಟಿಗೆ ಒಂದು ಸಮಾನವಾದ ತೆರಿಗೆ ನಿಯಮವನ್ನು ಒಪ್ಪಿಕೊಳ್ಳಲಾಗುತ್ತದೆ? ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಅಂತ ಹೇಳಿದ್ರು.
Advertisement
Advertisement
ಗ್ರಾಮೀಣ ಜನರನ್ನ ಕಡೆಗಣಿಸ್ತಿದ್ದಾರೆ: 1930ರ ಕಾಲದಲ್ಲಿ ಬ್ರಿಟೀಷರು ಉಪ್ಪಿಗೆ ತೆರಿಗೆ ಹಾಕಿದ್ರು. ಅದಾದ ನಂತರ ಬಂದ ಎಲ್ಲಾ ಸರ್ಕಾರಗಳು ಬ್ರಿಟೀಷರಂತೆ ಕೆಲಸ ಮಾಡುತ್ತಿವೆ. ಇವತ್ತ್ಯಾಕೆ ಇದೊಂದು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿದೆ ಅಂದ್ರೆ ಸಾಕಷ್ಟು ವರ್ಷಗಳಿಂದ ಬಂದಂತಹ ಯಾವುದೇ ಸರ್ಕಾರಗಳು ಕೂಡ ನಮ್ಮ ರೈತರು, ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸುತ್ತಲೇ ಬಂದಿವೆ ಅನ್ನೋದನ್ನ ನಾವು ಒಪ್ಪಿಕೊಳ್ಳಲೇಬೇಕು ಅಂದ್ರು.
Advertisement
ಕೈ ಉತ್ಪನ್ನಗಳು ಏನು ಅನ್ನೋದರ ಬಗ್ಗೆ ಒಂದು ಸ್ಪಷ್ಟವಾದ ಪರಿಕಲ್ಪನೆ ಇಲ್ಲದಂತಹ ಸರ್ಕಾರಗಳು ಇಂದು ನಮ್ಮ ದೇಶವನ್ನು ಆಳುತ್ತಾ ಇವೆ. ಬ್ರಿಟೀಷರು ನಮ್ಮ ದೇಶಕ್ಕೆ ಬರೋದಕ್ಕಿಂತಲೂ ಮೊದಲು ನಮ್ಮ ದೇಶದಲ್ಲಿ ಯಂತ್ರಗಳಿರಲಿಲ್ಲ. ಆ ಸಂದರ್ಭದಲ್ಲಿ ನಾವು ನಮ್ಮ ಕೈಯಿಂದ ಉತ್ಪನ್ನವಾದ ವಸ್ತುಗಳನ್ನೇ ಬಳಸುತ್ತಾ ಇದ್ದೆವು ಮತ್ತು ಅದನ್ನೇ ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೆವು. ಆ ಕಾಲದಲ್ಲಿಯೇ ನಾವು ಇಷ್ಟೊಂದು ಬಡವರಾಗಿರಲಿಲ್ಲ. ಕೈ ಉತ್ಪನ್ನಗಳು ಮತ್ತು ಗ್ರಾಮೀಣ ಬದುಕನ್ನು ನೋಡಬೇಕಾದ್ರೆ ಅದು ಕೇವಲ ಹಣಕಾಸಿಗಾಗಿ ಮಾತ್ರವಲ್ಲ. ಅದು ಅವರ ಅಸ್ತಿತ್ವ, ನಮ್ಮ ಸಂಸ್ಕೃತಿ, ಬದುಕಿನ ರೀತಿ. ಜ್ಞಾನ, ಕೊಂಡಾಟ ಹಾಗೂ ನಮ್ಮ ಸಂಭ್ರಮವನ್ನು ಹೇಳಿಕೊಳ್ಳುವಂತಹ ಒಂದು ರೈತ ಬದುಕು ಕಟ್ಟುವ ರೀತಿಯಾಗಿದೆ. ಹೀಗಿದ್ದಂತಹ ಸಂದರ್ಭದಲ್ಲಿ ಬ್ರಿಟೀಷರು ಇಲ್ಲಿಗೆ ಬಂದು ಅವರ ಯಂತ್ರಗಳನ್ನು ಇಲ್ಲಿಗೆ ತಂದು, ಅದರಿಂದ ಉತ್ಪಾದಿಸಿ, ನಮ್ಮ ಗ್ರಾಮೀಣ ಜನರ ಕೈ ಉತ್ಪನ್ನಗಳನ್ನು ಕಡಿಮೆ ಮಾಡಿ ವಿದೇಶಗಳಿಂದ ನಾವೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಮಾಡಿದ್ದಾರೆ ಅಂದ್ರು.
Advertisement
ಜಿಎಸ್‍ಟಿಯಿಂದ ಸೋಲು: ಇಂದಿನ ಬಿಜೆಪಿ ಸರ್ಕಾರ ಕೂಡ ಈ ಹಿಂದಿನ ಸರ್ಕಾರಗಳಂತೆ ಅದನ್ನೇ ಮುಂದುವರೆಸಿಕೊಂಡು ಬಂದಿದೆ. ಇಂದು ನಾವು ಈ ಹೋರಾಟ ಮಾಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಮ್ಮ ಮುಂದಿದೆಯಷ್ಟೆ. ಇವರು ಇನ್ನೂ ದೊಡ್ಡ ತಪ್ಪು ಮಾಡಿದ್ದಾರೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೈ ಉತ್ಪನ್ನಗಳನ್ನ ತೆರಿಗೆ ಮುಕ್ತಗೊಳಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಅವರು ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಎಸ್‍ಟಿಗೆ ವಿರೋಧ ವ್ಯಕ್ತಪಡಿಸಲೇಬೇಕು. ಇಂದು ಜಿಎಸ್‍ಟಿ ಎಲ್ಲರಿಗೂ ಸಮಾನ ತೆರಿಗೆ. ಯಾವ ಒಂದು ದೊಡ್ಡ ದೃಷ್ಟಿಕೋನದಿಂದ ಮಾಡಿದ್ರೋ? ಇದ್ರಿಂದ ಸೋಲುಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಒಂದೇ ಟ್ಯಾಕ್ಸ್. ಒಬ್ಬ ಸಾಮಾನ್ಯ ಮನುಷ್ಯನಿಗೂ ಅದೇ ಟ್ಯಾಕ್ಸ್ ಆದ್ರೆ ಹೇಗೆ ಬದುಕಲು ಸಾಧ್ಯ. ಸಾಮಾನ್ಯ ವ್ಯಕ್ತಿಯ ಉತ್ಪನನ್ನಗಳಿಗೆ ಬೆಲೆ ಕೊಡ್ತಾ ಇಲ್ಲ. ಆತನಿಗೆ ಉದ್ಯೋಗಾವಕಶವನ್ನು ಕೊಡ್ತಾ ಇಲ್ಲ. ಈಗಾಗಲೇ ಯಾಂತ್ರೀಕರಣದಿಂದ ಒದ್ದಾಡುತ್ತಿರೋ ಹೊತ್ತಲ್ಲಿ ಆತನ ಮೇಲೆ ಈ ಜಿಎಸ್‍ಟಿ ಯನ್ನು ಹಾಕಿ ತುಳಿದರೆ ಈ ದೇಶ ಏನಾಗಬೇಕು ಅಂತ ಹೇಳಿದ್ರು.
ಇದೇ ವೇಳೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಜಿಎಸ್‍ಟಿ ತೆರಿಗೆ ಜಾರಿಗೆ ತರುವ ಮೊದಲು ಅವರು ಕೈ ಉತ್ಪನ್ನಗಳನ್ನು ಪರಿಗಣಿಸಲೇ ಇಲ್ಲ. ಕೈ ಉತ್ಪನ್ನ ಅನ್ನೋ ವ್ಯಾಖ್ಯಾನವೇ ಇಡೀ ಜಿಎಸ್‍ಟಿ ಎಂಬ ಪದಗುಚ್ಚದಲ್ಲೇ ಇಲ್ಲ. ಹೀಗಾಗಿ ಇದೊಂದು ಯಂತ್ರೋತ್ಪನ್ನಗಳ ಪರವಾದ ಹಾಗೂ ಕೈ ಉತ್ಪನ್ನಗಳ ವಿರುದ್ಧವಾದ ತೆರಿಗೆಯಾಗಿ ಜಾರಿಗೆ ಬಂದಿದೆ. ಕೈ ಉತ್ಪನ್ನಗಳು ಸಹಜವಾಗಿಯೇ ದುಬಾರಿ. ಹೀಗಾಗಿ ಅವುಗಳಿಗೆ ತೆರಿಗೆ ವಿಧಿಸದೇ ಇರುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂದು ಟಾಟಾ, ಬಿರ್ಲಾಗಳಿಗೆ ಸಾಮಾಜಿಕ ನ್ಯಾಯಗಳನ್ನು ವಿಧಿಸುತ್ತಿವೆ. ಹೀಗಾಗಿ ಈ ವಿಷಯ ನಿರ್ಧಾರವಾಗುವವರೆಗೆ ಅಂದ್ರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗೋವರೆಗೆ ಈ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.