Connect with us

Cinema

ಪವರ್ ಸ್ಟಾರ್ ಫುಟ್‍ಪಾತ್‍ ನಲ್ಲಿ ನಿಂತು ತಿಂಡಿ ತಿಂದಿದ್ದರ ಹಿಂದಿನ ಸ್ಟೋರಿ ಓದಿ

Published

on

ಬೆಂಗಳೂರು: ದೊಡ್ಮನೆ ಮಕ್ಕಳಿಗೆ ಯಾವತ್ತೂ ದೊಡ್ಡ ಮನಸೇ ಇರುತ್ತದೆ. ಅಣ್ಣಾವ್ರ ಕುಡಿಗಳಾದರೂ ಅದನ್ನು ತೋರಿಸಿದವರಲ್ಲ. ಆ ಹೆಸರನ್ನು ಇಟ್ಟುಕೊಂಡು ಮೆರೆದವರಲ್ಲ. ಅದಕ್ಕೆ ಇಂದಿಗೂ ಕನ್ನಡಿಗರು ದೊಡ್ಮನೆಗೆ ಅದೇ ಪ್ರೀತಿ, ಗೌರವ ತೋರಿಸುತ್ತಾರೆ. ಅದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪುನೀತ್ ರಾಜ್‍ಕುಮಾರ್ ಅಂಥದ್ದೊಂದು ಘಟನೆಗೆ ಕಾರಣರಾಗಿ ಅಚ್ಚರಿ ಮೂಡಿಸಿದ್ದಾರೆ.

ಇದು ರಾಜಕುಮಾರನ ಇನ್ನೊಂದು ಮುಖ. ಇದು ನಡೆದಿದ್ದು ಹೊಸಪೇಟೆಯ ಹೈವೇ ರೋಡಿನಲ್ಲಿ. ಟಗರು ಸಿನಿಮಾ ಆಡಿಯೋ ರಿಲೀಸ್ ಸಮಾರಂಭಕ್ಕಾಗಿ ಪುನೀತ್ ಹೊಸಪೇಟೆಗೆ ಹೋಗಿದ್ದರು. ಆದರೆ ಅದೇ ದಿನ ರಾತ್ರಿ ಲೇಟಾಗಿದ್ದರಿಂದ ಅಲ್ಲಿಂದ ಬೆಂಗಳೂರಿಗೆ ಮರಳಲು ಆಗಲಿಲ್ಲ. ಬೆಳಗ್ಗೆ ಬೇಗ ಎದ್ದು ಅಲ್ಲಿಂದ ಹೊರಟಿದ್ದಾರೆ. ಜೊತೆಗೆ ನಿರ್ಮಾಪಕ ರಾಜಕುಮಾರ್ ಮತ್ತು ಸ್ಥಿರ ಚಿತ್ರ ಛಾಯಾಗ್ರಾಹಕ ಚಂದನ್ ಕೂಡ ಇದ್ದರು.

ಹೋಟೆಲ್‍ ನಲ್ಲಿ ತಿಂಡಿ ತಿನ್ನುತ್ತಾ ಕುಳಿತರೆ ತಡವಾಗುತ್ತದೆಂದು ದಾರಿಯಲ್ಲಿ ಎಲ್ಲಾದರೂ ತಿಂಡಿ ಮುಗಿಸಿದರಾಯಿತೆಂದು ಕಾರು ಏರಿದ್ದಾರೆ. ಹೊಸಪೇಟೆ ದಾಟಿ ಹೈವೇಗೆ ಬರುತ್ತಿದ್ದಂತೆಯೇ ಕಣ್ಣಿಗೆ ಬಿದ್ದಿದೆ ಆ ಮೊಬೈಲ್ ಕ್ಯಾಂಟೀನ್. ಹೋಟೆಲ್ ನಲ್ಲಿ ತಿಂದರೂ, ರೋಡಿನ ಪಕ್ಕ ನಿಂತು ತಿಂದರೂ ಅದು ಅನ್ನವೇ ಎನ್ನುವುದು ಅಣ್ಣಾವ್ರು ಹೇಳುತ್ತಿದ್ದ ತೂಕದ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಪುನೀತ್ ಕೂಡ ಮೊಬೈಲ್ ಕ್ಯಾಂಟೀನ್ ಮುಂದೆ ಗಾಡಿ ನಿಲ್ಲಿಸಿ ಇಡ್ಲಿ, ವಡೆ ಇತ್ಯಾದಿ ತಿಂಡಿಗಳನ್ನು ತಿಂದರು.

ಖುದ್ದು ಅಪ್ಪು ಅಂಥದ್ದೊಂದು ಜಾಗದಲ್ಲಿ ಬಂದು ನಿಂತರೆ ಯಾರಿಗೆ ತಾನೇ ಶಾಕ್ ಆಗುವುದಿಲ್ಲ ಹೇಳಿ? ಕ್ಯಾಂಟೀನ್ ಮಾಲೀಕನಿಗೂ ಅದೇ ಆಗಿದೆ. ಓಡಾಡುತ್ತಿದ್ದ ಜನರೂ ಕುತೂಹಲದಿಂದ ಪುನೀತ್ ಅವರನ್ನು ಮಾತನಾಡಿಸಿ ಖುಷಿ ಪಟ್ಟಿದ್ದಾರೆ. ಈ ರೀತಿ ಅಪ್ಪ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಅಂಜನಿಪುತ್ರ.

 

 

 

Click to comment

Leave a Reply

Your email address will not be published. Required fields are marked *