ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತೀ ಬಾರಿಯೂ ಬೇರೆ ಬೇರೆ ರಾಜ್ಯಗಳಿಂದ ತಮ್ಮ ಸಂಸ್ಕೃತಿ, ಹಿರಿಮೆ, ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಬಳಿಕ ಅವುಗಳನ್ನು ಪರೇಡ್ ವೇಳೆ ಪ್ರದರ್ಶನ ಮಾಡಲಾಗುತ್ತದೆ. ಇದರಲ್ಲಿ ಕರ್ನಾಟಕದ ಟ್ಯಾಬ್ಲೋ ಕೂಡ ಒಂದಾಗಿದೆ. ಈ ಬಾರಿ ಕರ್ನಾಟಕ ಟ್ಯಾಬ್ಲೋದಲ್ಲಿ ವನ್ಯಜೀವಿಗಳ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ ಸ್ತಬ್ಧಚಿತ್ರದಲ್ಲಿ ಏನಿರಲಿದೆ?: ಪ್ರಾಕೃತಿಕವಾಗಿ ಅರಣ್ಯ ಮತ್ತು ವನ್ಯ ಸಂಪತ್ತಿನಿಂದ ಕೂಡಿರುವ ಕರ್ನಾಟಕವನ್ನು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ. ಈ ಬಾರಿ ಟ್ಯಾಬ್ಲೋದಲ್ಲಿ ಪ್ರಾಣಿಗಳ ಚಲನೆಯನ್ನು ಅಳವಡಿಸಲಾಗಿದೆ. ಇಡೀ ದೇಶದಲ್ಲಿರೋ ಹುಲಿಗಳ ಪೈಕಿ ಸುಮಾರು 408 ಹುಲಿ ಕರ್ನಾಟಕ ರಾಜ್ಯದಲ್ಲಿದೆ. ಸಿಂಗಳೀಕಗಳ ಸಂಖ್ಯೆಯಲ್ಲಿಯೂ ರಾಜ್ಯದಲ್ಲಿ ಹೆಚ್ಚಿದೆ. ಸುಮಾರು 6100ಕ್ಕೂ ಹೆಚ್ಚು ಆನೆಗಳಿಗೆ ರಾಜ್ಯವು ಆಶ್ರಯ ನೀಡಿದೆ. ದೇಶ ವಿದೇಶದಿಂದ ಇಲ್ಲಿಗೆ ಅನೇಕ ಪಕ್ಷಿಗಳು ವಲಸೆ ಬರುತ್ತವೆ. ಒಟ್ಟಿನಲ್ಲಿ ವೈವಿಧ್ಯಮಯ ಪ್ರಾಣಿ-ಪಕ್ಷಿಗಳ ಸಂಕುಲಗಳು ರಾಜ್ಯದಲ್ಲಿವೆ. ಹೀಗಾಗಿ ಇವುಗಳನ್ನು ಈ ಬಾರಿಯ ಟ್ಯಾಬ್ಲೋದಲ್ಲಿ ಪ್ರತಿನಿಧಿಸಲಾಗಿದೆ.
Advertisement
Advertisement
ಒಟ್ಟಿನಲ್ಲಿ ಇಡೀ ಸ್ತಬ್ಧಚಿತ್ರವನ್ನು ಪ್ರಮುಖವಾಗಿ ಮರ-ಗಿಡಗಳು ಹಾಗೂ ಪ್ರಾಣಿ-ಪಕ್ಷಿಗಳು ಆವರಿಸಿರುವಂತೆ ತೋರಿಸಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಕೋತಿಗಳು ಇದ್ದರೆ, ಹುಲಿಗಳ ರಾಜಧಾನಿ ಎನ್ನುವುದನ್ನು ತೋರಿಸುವ ಸಲುವಾಗಿ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹುಲಿಯೊಂದನ್ನು ಪ್ರಧಾನವಾಗಿ ತೋರಿಸಲಾಗಿದೆ. ದಿಟ್ಟಿಸಿ ನೋಡುತ್ತಿರುವ ಕಾಡುಕೋಣದ ಪಕ್ಕದಲ್ಲಿ ಮುನ್ನುಗ್ಗಿ ಬರುತ್ತಿರುವ ಹುಲಿ, ಸೀಳುನಾಯಿಗಳನ್ನು ತೋರಿಸಲಾಗಿದೆ.
Advertisement
ಚಿರತೆ, ಕಿಂಗ್ ಫಿಶರ್(ಮಿಂಚುಳ್ಳಿ), ಕೊಕ್ಕರೆಗಳು ಸಹ ಗಮನ ಸೆಳೆಯುವಂತಿವೆ. ಸ್ತಬ್ಧ ಚಿತ್ರದ ಕೊನೆಯಲ್ಲಿ ಆನೆಗಳ ಹಿಂಡು ಮುನ್ನುಗಿ ಬರುತ್ತಿರುವಂತಿದೆ. ಇಷ್ಟು ಮಾತ್ರವಲ್ಲದೇ ಬಿದಿರುಗಳ ಮೇಲೆ ನೆರೆದಿರುವ ಕೊಕ್ಕರೆಗಳ ಹಿಂಡನ್ನು ಕೂಡ ತೋರಿಸಲಾಗಿದೆ. ಒಟ್ಟಿನಲ್ಲಿ ಈ ಬಾರಿಯ ಗಣರಾಜೋತ್ಸವದ ಸ್ತಬ್ಧಚಿತ್ರದಲ್ಲಿ ಕರ್ನಾಟಕದ ಟ್ಯಾಬ್ಲೋ ಎಲ್ಲರ ಗಮನಸೆಳೆಯುವಂತಿದೆ.
Advertisement
ನೇತ್ರಾವತಿ ಚೌಹಾನ್ ಗೆ ಪ್ರಶಸ್ತಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವಡ್ಡರಹೊಸೂರು ಗ್ರಾಮದ ನೇತ್ರಾವತಿ ತನ್ನ ಪ್ರಾಣವನ್ನು ಲೆಕ್ಕಿಸದೆ ಮುಳುಗುತ್ತಿದ್ದ ಇಬ್ಬರ ಬಾಲಕರನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದರು. ಇವರ ಈ ಧೈರ್ಯವನ್ನು ನೋಡಿ ನೇತ್ರಾವತಿ ಅವರಿಗೆ ಮರಣೋತ್ತರ ಗೀತಾ ಚೋಪ್ರಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ನೇತ್ರಾವತಿ ಚೌವಾನ್ ಅವರು 2017 ಮೇ 13ರಂದು ಕೆರೆ ಹತ್ತಿರ ಬಟ್ಟೆ ಒಗೆಯುತ್ತಿದ್ದರು. ಮಳೆಯಿದ್ದ ಕಾರಣ ಕೆರೆ ತುಂಬಿತ್ತು. ಈ ವೇಳೆ ಇಬ್ಬರು ಬಾಲಕರಾದ ಗಣೇಶ್(10) ಮತ್ತು ಮಾಂತೇಶ್(ಮುತ್ತು) (16) ಕೆರೆಯಲ್ಲಿ ಈಜಾಡಲು ಹೋಗಿದ್ದರು. ಈಜಾಡಲು ಹೋದ ಇಬ್ಬರು ಹುಡುಗರು ನೀರಿನಲ್ಲಿ ಮುಳುಗುತ್ತಿರುವುದನ್ನು ನೇತ್ರಾವತಿ ಗಮನಿಸಿದ್ದರು. ಆ ಸಂದರ್ಭದಲ್ಲಿ ಭಯಪಡದೆ ನೇತ್ರಾವತಿ 30 ಅಡಿ ಆಳದ ಕೆರೆಯಲ್ಲಿ ಧುಮುಕಿ ಬಾಲಕರನ್ನು ರಕ್ಷಿಸಲು ಹೋಗಿದ್ದಾರೆ. ನಂತರ 16 ವರ್ಷದ ಮುತ್ತುವನ್ನು ಸುರಕ್ಷಿತವಾಗಿ ರಕ್ಷಿಸಿ, ಆತನನ್ನು ದಡ ಸೇರಿಸಿದ್ದಾರೆ.
ನೇತ್ರಾವತಿ ಅವರ ಧೈರ್ಯವನ್ನು ಸಹಿಷ್ಣುತೆ, ಪರಿಶ್ರಮ ಎಲ್ಲರಿಗೂ ಉದಾಹರಣೆಯಾಗಿದೆ. ಹೆದರದೆ ಮತ್ತೆ ಕೆರೆಗೆ ಹಾರಿ ಗಣೇಶ್ ನನ್ನು ರಕ್ಷಿಸಲು ಮುಂದಾದರು. ಆದರೆ ಕೆರೆಯಲ್ಲಿ ಮುಳುಗುತ್ತಿದ್ದ ಗಣೇಶ್ ಭಯಭೀತನಾಗಿದ್ದು, ರಕ್ಷಣೆಗೆ ಬಂದ ನೇತ್ರಾವತಿಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡನು. ಇದರಿಂದ ಉಸಿರಾಡಲು ತೊಂದರೆಯಾಗಿ ಅಲ್ಲೇ ಸಾವನ್ನಪ್ಪಿದ್ದಾರೆ. ಗಣೇಶ್ ಕೂಡ ಅಲ್ಲೇ ಸಾವನ್ನಪ್ಪಿದ್ದನು.