ಚಿಕ್ಕಬಳ್ಳಾಪುರ: ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಹಲವು ಕೆರೆಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಾಪುರ-ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೂರಾರು ಕೆರೆಗಳಿಗೆ ಹರಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಕೆಸಿ ವ್ಯಾಲಿ ಹಾಗೂ ಎಚ್‍ಎನ್ ವ್ಯಾಲಿ ಯೋಜನೆ ಕಾಮಗಾರಿ ಆರಂಭಿಸಿದೆ.
ಈ ಯೋಜನೆಗಳಿಗೆ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ನೀರಾವರಿ ಹೋರಾಟಗಾರರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಯೋಜನೆಯ ವಿರೋಧದ ನಡುವೆಯೂ ಯೋಜನೆಗಳನ್ನು ಜಾರಿ ಮಾಡಲು ಸಿದ್ಧ ಎಂದು ಸಿದ್ದರಾಮಯ್ಯ ಸರ್ಕಾರ ಹೇಳುತ್ತಿದೆ. ಆದರೆ ಕೋಲಾರ-ಚಿಕ್ಕಬಳ್ಳಾಪುರದ ಜನರಿಗೆ ಈ ಸಂಸ್ಕರಿತ ತ್ಯಾಜ್ಯ ನೀರು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಅನುಮಾನಗಳು ಬಲವಾಗಿ ಕಾಡತೊಡಗಿವೆ.
Advertisement
Advertisement
ಸ್ವತಃ ಶಾಶ್ವತ ನೀರಾವರಿ ಹೋರಾಟಗಾರರು ಪ್ರತಿಷ್ಠಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಾಗಾರ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಾಗಾರದಲ್ಲಿ ಸ್ವತಃ ಜನ ಬೆಚ್ಚಿಬೀಳುವ ಸತ್ಯವನ್ನ ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ.
Advertisement
ವಿಜ್ಞಾನಿಗಳು ಹೇಳಿದ್ದು ಏನು?
ಐಐಎಸ್‍ಸಿ ಸಂಸ್ಥೆಯ ಜಲತಜ್ಞ ಟಿ.ವಿ ರಾಮಚಂದ್ರ ಮಾತನಾಡಿದ ಅವರು, ಬೆಂಗಳೂರಿನ ಬಹುತೇಕ ಕೆರೆಗಳಲ್ಲಿ ಕೈಗಾರಿಕೆಗಳ ರಾಸಾಯನಿಕ ವಸ್ತುಗಳು ಈಗಾಗಲೇ ಸೇರಿಕೊಂಡಿವೆ. ಸಾರಜನಕ, ಪೊಟಾಷಿಯಂ, ಸೇರಿದಂತೆ ರಾಸಾಯನಿಕ ವಸ್ತುಗಳು ಕೆರೆಗಳಿಗೆ ಸೇರಿದ್ದು, ಈ ನೀರನ್ನ ಕೇವಲ ಎರಡು ಹಂತದಲ್ಲಿ ಸಂಸ್ಕರಿಸಿದರೇ ಖಂಡಿತ ಈ ನೀರು ಸುರಕ್ಷಿತ ಅಲ್ಲ. ಈ ನೀರು ಕೋಲಾರ-ಚಿಕ್ಕಬಳ್ಳಾಪುರ ಭಾಗದ ಕೆರೆಗಳಿಗೆ ಹರಿದರೆ ಖಂಡಿತ ಅಂರ್ತಜಲ ಕಲ್ಮಶವಾಗುವುದು ಸತ್ಯ ಎಂದು ತಿಳಿಸಿದ್ದಾರೆ.
Advertisement
ಜಕ್ಕೂರು ಕೆರೆಯಲ್ಲಿನ ಮಾದರಿಯನ್ನ ಅನುಸರಿಸಿ ಸಂಸ್ಕರಿಸಿದರೆ 90% ರಷ್ಟು ಸುರಕ್ಷಿತ ಎನ್ನುವ ಮಾತನ್ನು ಸಹ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಇನ್ನು ಒಂದು ವೇಳೆ ಈ ನೀರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿದು ಬಂದರೆ, ಫ್ಲೋರೈಡ್, ನೈಟ್ರೈಟ್, ರಂಜಕ, ಸಾರಜನಕ ಸೇರಿದಂತೆ ಅಪಾಯಕಾರಿ ವಿಷಯುಕ್ತ ಲೋಹದ ಅಂಶಗಳುಳ್ಳ ನೀರು ಅಂರ್ತಜಲಕ್ಕೆ ಬಳುವಳಿಯಾಗಿ ಬರುತ್ತದೆ. ಇದರಿಂದ ಈ ಭಾಗದ ಬೆಳೆಗಳು ಮಣ್ಣಿನ ಗುಣಲಕ್ಷಗಳು ಸೇರಿದಂತೆ ಮನುಷ್ಯನ ಜೀವನ ನರಕಕ್ಕೆ ದೂಡಲಿದೆ ಎಂದು ಕೃಷಿ ವಿಜ್ಞಾನಿ ಡಾ. ಕೆ.ಆರ್. ಹುಲ್ಲನಾಚೇಗೌಡ ಹೇಳಿದರು.
ಸರ್ಕಾರ ಏನು ಹೇಳುತ್ತೆ..?
ರಾಜ್ಯ ಸರ್ಕಾರ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನ ಸಂಸ್ಕರಿಸಿ ಕರೆಗಳಿಗೆ ಹರಿಸಲಾಗುತ್ತದೆ. ಇದರಿಂದ ಯಾವುದೇ ರಾಸಾನಿಕಗಳು ಇರುವುದಿಲ್ಲ ಎಂದು ಹೇಳುತ್ತಿದೆ. ಆದರೆ ಎರಡು ಹಂತದ ಸಂಸ್ಕರಣೆಯಿಂದ ಸಂಪೂರ್ಣ ಶುದ್ಧೀಕರಣ ಸಾಧ್ಯವೇ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಸಿಂಗಾಪುರ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಸಂಸ್ಕರಿತ ನೀರನ್ನೇ ಬಳಸಲಾಗುತ್ತದೆ. ನಾವು ಯಾಕೆ ಬಳಸಬಾರದು ಎಂಬುದು ಸರ್ಕಾರದ ವಾದವಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸುವ ವಿಜ್ಞಾನಿಗಳು ಸಿಂಗಾಪುರ್ ನಲ್ಲಿ ಕೆರೆಗಳಿಗೆ ತ್ಯಾಜ್ಯ ನೀರನ್ನ ಬಿಡುವ ಮೊದಲು 100% ರಷ್ಟು ಸಂಪೂರ್ಣವಾಗಿ ಶುದ್ಧೀಕರಿಸಿ ಬಿಡಲಾಗುತ್ತದೆ. ಹೀಗಾಗಿ ಅಲ್ಲಿನ ನೀರಲ್ಲಿ ರಾಸಾಯನಿಕಗಳಿರುವುದಿಲ್ಲ. ಆದರೆ ನಮ್ಮ ಬೆಂಗಳೂರಿನ ಕೆರೆಗಳಲ್ಲಿ ಈಗಾಗಲೇ ರಾಸಾಯನಿಕ ಗಳು ಸೇರಿಕೊಂಡು ನೀರು ಮಲಿನವಾಗಿವೆ. ಅಲ್ಲಿ ಕೆರೆಗಳಿಗೆ ರಾಸಾಯನಿಕ ಬಿಟ್ಟರೆ ಕಾನೂನು ರೀತಿ ಕಠಿಣ ಶಿಕ್ಷೆ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಕಾನೂನುಗಳಿದ್ದರೂ, ಪಾಲನೆಯಾಗದೆ ಈಗಾಗಲೇ ಕೆರೆಗಳು ಕಲುಷಿತಗೊಂಡಿವೆ. ಹೀಗಾಗಿ ಸಿಂಗಾಪುರ ದೇಶವನ್ನು ಬೆಂಗಳೂರಿಗೆ ಹೊಲಿಕೆ ಬೇಡವೇ ಬೇಡ. ಇಲ್ಲಿ ಸೂಟ್ ಕೇಸ್ ಕೊಟ್ಟರೆ ಏನು ಬೇಕಾದ್ರೂ ಜನಪ್ರತಿನಿಧಿಗಳು ಮಾಡುತ್ತಾರೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ವಿಜ್ಞಾನಿಗಳು ತಿರುಗೇಟು ನೀಡಿದರು.
ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿದ ನೀರಾವರಿ ಹೋರಾಟಗಾರರು, ಜಿಲ್ಲೆಯ ಜನರ ಆಂತಕ ಮತ್ತಷ್ಟು ಹೆಚ್ಚಾಗಿದೆ ಮುಂದೆ ಈ ಯೋಜನೆಗಳು ಯಾವ ಹಂತಕ್ಕೆ ಬಂದು ನಿಲ್ಲುತ್ತದೋ ಕಾದು ನೋಡಬೇಕಿದೆ.