ಕಲಬುರಗಿ: ಜಿಲ್ಲೆ ಸೇರಿದಂತೆ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸೂರ್ಯನ ಹೊಡೆತಕ್ಕೆ ಪುಟ್ಟ ಕಂದಮ್ಮಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ದಿನದಿಂದ ದಿನಕ್ಕೆ ಹೈ-ಕ ಭಾಗದ 6 ಜಿಲ್ಲೆಯಲ್ಲಿ ಅಕ್ಷರಶಃ ಬಿಸಲಿನ ತಾಪ ಕಾದ ಕೆಂಡದಂತಾಗುತ್ತಿದೆ. ಹೀಗಾಗಿ ಕಲಬುರಗಿಯಲ್ಲಿನ ಜನರ ಬದುಕು ಸದ್ಯ ನರಕಯಾತನೆಯಂತಾಗಿದ್ದು, ಮನೆಯಲ್ಲಿದ್ರೂ ತೊಂದರೆ ಹೊರಗಡೆ ಬಂದ್ರೂ ತೊಂದರೆ ಎನ್ನುವಂತಾಗಿದೆ.
ದೊಡ್ಡವರು ಹೇಗೋ ಅಬ್ಬಬ್ಬಾ ಎಂದು ದಿನ ಕಳೆಯುತ್ತಿದ್ದಾರೆ. ಆದರೆ ಹಸುಗೂಸುಗಳ ಸ್ಥಿತಿಗತಿ ದೇವರೇ ಕಾಪಾಡಬೇಕು ಎನ್ನುವ ಹಾಗಾಗಿದೆ. ಕಾರಣ ಬಿಸಿಲಿನ ಹೊಡೆತಕ್ಕೆ ಮಕ್ಕಳಿಗೆ ಡಿ-ಹೈಡ್ರೇಷನ್ ಆಗಿ ಆಸ್ಪತ್ರೆಗೆ ದಾಖಲಾಗುತ್ತಿವೆ. ಕಳೆದ ಕೆಲ ದಿನಗಳಿಂದ ಬಿಸಿಲು 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಕೇರ್ ಮಾಡಿ ಎಂದು ಮಕ್ಕಳ ತಜ್ಞ ವೈದ್ಯರು ಹೇಳುತ್ತಾರೆ.
ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್ ಹೀಗಿದೆ
* ಮಗುವನ್ನು ತೆಳುವಾದ ಬಟ್ಟೆಯಿಂದ ಕವರ್ ಮಾಡಿ
* ತಾಯಿ ಪದೇ ಪದೇ ಎದೆಹಾಲು ಉಣಿಸಬೇಕು
* ತಾಯಿ ನೀರನ್ನು ಹೆಚ್ಚಿಗೆ ಸೇವಿಸಲಿ.
ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿರುವ ಹೆರಿಗೆ ನಂತರದ ವಾರ್ಡ್‍ನಲ್ಲಿ ಏಸಿ ಇಲ್ಲ. ಹೀಗಾಗಿ ಫ್ಯಾನ್ ನಿಂದ ಬರೋ ಬಿಸಿಗಾಳಿಯಿಂದ ಬಳಲುವ ಅನಿವಾರ್ಯ ತಾಯಿಗೆ ಬಂದೊದಗಿದೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾಸ್ಪತ್ರೆಯ ಸರ್ಜನ್ ಕೇಳಿದ್ರೆ, ನಮ್ಮ ಬಳಿ ಇರುವ ತನಕ ನಾವು ಕೇರ್ ಮಾಡುವುದಾಗಿ ಹೇಳುತ್ತಿದ್ದಾರೆ.
ಬಿಸಿಲಿನಿಂದ ಉಂಟಾಗುತ್ತಿರೋ ನಾನಾ ಕಾಯಿಲೆ ಜೀವಕ್ಕೆ ಅಪಾಯ ತರಬಲ್ಲದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ.