ಕೆ.ಆರ್ ಪೇಟೆ ಗೆಲುವಿನ ಹಿಂದೆ ಸೀಕ್ರೆಟ್ – ಅದೃಷ್ಟ ತಂದು ಕೊಟ್ಟ ತೋಟದ ಮನೆ

Public TV
2 Min Read
mnd kr pete copy

ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯ ಫಲಿತಾಂಶ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಉಲ್ಟಾ ಮಾಡುವುದರ ಜೊತೆಗೆ ಜೆಡಿಎಸ್ ಭದ್ರಕೋಟೆಯನ್ನು ಒಡೆದು ಬಿಜೆಪಿ ತನ್ನ ಅಸ್ತಿತ್ವಕ್ಕೆ ಇದೀಗ ಭದ್ರ ಬುನಾದಿ ಹಾಕಿಕೊಂಡಿದೆ.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು, ವಿಜಯೇಂದ್ರ ಎಂಬ ಮಾಸ್ಟರ್ ಮೈಂಡ್. ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ 15 ದಿನ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಪಟ್ಟನ್ನು ಹಾಕಿದ್ದೇ ನಾರಾಯಣಗೌಡ ಅವರ ಗೆಲುವಿಗೆ ಪ್ರಮುಖ ಕಾರಣ. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

VIJAYENDRA 1

ತೋಟದ ಮನೆಯ ಗೆಲುವಿನ ರಹಸ್ಯ:
ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡರೂ ಪ್ರತಿದಿನ ಬೆಂಗಳೂರಿನಿಂದ ಬರುವುದು ಕಷ್ಟ. ಮೈಸೂರಿನ ಯಾವುದೋ ಹೋಟೆಲ್‍ನಲ್ಲಿ ಉಳಿದುಕೊಂಡು ಬರಬಹುದು ಎಂದು ಬಿಜೆಪಿ ಕಾರ್ಯಕರ್ತರು ಊಹಿಸಿದ್ದರು. ಆದರೆ ವಿಜಯೇಂದ್ರ ಉಪಚುನಾವಣೆ ಘೋಷಣೆ ಆದಾಗಿನಿಂದಲೂ ಕೆಆರ್‍ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದರು.

ತನ್ನ ಮೇಲೆ ಹೊರಿಸಿದ್ದ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕೆ.ಆರ್ ಪೇಟೆ ಕ್ಷೇತ್ರದಲ್ಲೇ 15 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಅದು ಕೂಡ ಒಂದು ತೋಟದ ಮನೆಯಲ್ಲಿ. ಕೆ.ಆರ್ ಪೇಟೆಯಿಂದ 4 ಕಿ.ಮೀ ದೂರವಿರುವ ಪುರ ಗ್ರಾಮದ ಹೊರಭಾಗದ ಒಂದು ತೋಟದ ಮನೆಯಲ್ಲಿ ವಿಜಯೇಂದ್ರ ನೆಲೆಸಿದ್ದರು. ಇದನ್ನು ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

Narayana gowda

ವಿಜಯೇಂದ್ರ ಈ ತೋಟದ ಮನೆಯಲ್ಲಿ ಸುಮ್ಮನೆ ಮಲಗಿಕೊಂಡು ಅಥವಾ ವಿಶ್ರಾಂತಿ ಪಡೆಯುತ್ತ ಕಾಲ ಕಳೆಯುತ್ತಿರಲಿಲ್ಲ. ಈ ತೋಟದ ಮನೆಯಲ್ಲಿ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸುವುದು ಹೇಗೆ ಎಂದು ರಣತಂತ್ರವನ್ನು ಹೆಣೆಯುತ್ತಿದ್ದರು. ಪ್ರತಿನಿತ್ಯ ಈ ತೋಟದ ಮನೆಯಲ್ಲಿ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಯಾವ ಊರುಗಳಲ್ಲಿ ಎಷ್ಟು ಮತಗಳಿವೆ ಎಷ್ಟು ಮತಗಳನ್ನು ಪಡೆಯಬೇಕು ಎಂಬ ಸ್ಟಾಟರ್ಜಿ ಮಾಡುತ್ತಿದ್ದರು. ಇದನ್ನೂ ಓದಿ: 43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?

ಪ್ರಶಾಂತ ವಾತಾವರಣ:
ಕೆ.ಆರ್ ಪೇಟೆಯ ಹೊರವಲಯದ ತೋಟದ ಮನೆಯಲ್ಲಿ ಉಳಿದುಕೊಂಡಿದ್ದ ವಿಜಯೇಂದ್ರ ಅಲ್ಲಿನ ಪ್ರಶಾಂತ ವಾತಾವರಣವನ್ನು ಸವಿಯುತ್ತಿದ್ದರು. ಪ್ರತಿದಿನ ವಿಜಯೇಂದ್ರ ತೋಟದಲ್ಲಿ ಇದ್ದ ಕೆರೆಯ ಏರಿ ಮೇಲೆ ವಾಕ್ ಮಾಡುತ್ತಿದ್ದರು. ಇದಲ್ಲದೇ ಇಡೀ ತೋಟವನ್ನು ಒಂದು ಸುತ್ತು ಹಾಕುತ್ತಿದ್ದರು. ವಿಜಯೇಂದ್ರ ರಣತಂತ್ರ ಹೆಣೆಯಲು ಈ ಪ್ರಶಾಂತವಾದ ವಾತಾವರಣ ತುಂಬಾ ಅನುಕೂಲವಾಗಿದೆ ಎಂದು ಅವರ ಆಪ್ತರು ಸಹ ಹೇಳಿದ್ದಾರೆ. ಇದಲ್ಲದೇ ಈ ತೋಟದ ಮನೆ ವಿಜಯೇಂದ್ರ ಅವರಿಗೆ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಅದೃಷ್ಟವನ್ನು ತಂದುಕೊಟ್ಟಿದೆ ಎಂದು ಸಹ ವಿಜಯೇಂದ್ರ ಆಪ್ತರು ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *