ನವದೆಹಲಿ: ಭಾರತೀಯ ಹೆಮ್ಮೆಯ ಯೋಧ, ಪೈಲಟ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆ ವಿಚಾರದಲ್ಲಿ ಕೊನೆಯವರೆಗೂ ಪಾಕಿಸ್ತಾನ ಆಟವಾಡಿದ್ದು, ಭಾರತೀಯ ಆಕ್ರೋಶಕ್ಕೆ ಕಾರಣವಾಗಿತ್ತು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರತದ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದ ಪಾಕಿಸ್ತಾನ ಕೊನೆ ಕ್ಷಣದವರೆಗೂ ಕಿರಿಕ್ ತೆಗೆದಿದೆ. ಭಾರತಕ್ಕೆ ಹಸ್ತಾಂತರ ಮಾಡುವುದಕ್ಕೂ ಮೊದಲು ಪಾಕ್ ನಿಂದ ಅಭಿನಂದನ್ ಕೈಯಲ್ಲಿ ವಿಡಿಯೋ ರೆಕಾರ್ಡ್ ಮಾಡಿಸಲಾಗಿತ್ತು.
ವಿಡಿಯೋ ರೆಕಾರ್ಡ್ ಮಾಡಿಯೇ ಹಸ್ತಾಂತರ ಮಾಡುವುದೆಂದು ಪಾಕ್ ಹಟಕ್ಕೆ ಬಿದ್ದಿತ್ತು. ನಾಲ್ಕೈದು ಗಂಟೆ ಲಾಹೋರ್ ನಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಕಿರಿಕ್ ತೆಗೆದಿದ್ದರು. ಹೀಗಾಗಿ ಸಂಜೆ 4 ಗಂಟೆಗೆ ಲಾಹೋರ್‍ಗೆ ಬಂದರೂ ಭಾರತ ಪ್ರವೇಶಿಸುವ ವೇಳೆ ರಾತ್ರಿ 9 ಗಂಟೆ ಆಗಿದೆ ಎಂಬುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಅವರನ್ನು ನೋಡಲು ನಿನ್ನೆ ಮುಂಜಾನೆಯಿಂದಲೇ ವಾಘಾ ಗಡಿಯಲ್ಲಿ ಕಾದು ಕುಳಿತಿದ್ದರು. ಭಾರತೀಯ ಅಭಿಮಾನಿಗಳ ಈ ಛಲ ರಾತ್ರಿಯಾದ್ರೂ ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇವೆಲ್ಲದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಅಭಿನಂದನ್ ಭಾರತದ ನೆಲವನ್ನು ಪ್ರವೇಶಿಸಿದ್ದರು.
ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು. ವಾಘಾ ಗಡಿಯಿಂದ ನೇರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಯಿತು. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತಂದಿದ್ದಾರೆ. ದೆಹಲಿಯಲ್ಲಿಂದು ಅವರ ಆರೋಗ್ಯ ತಪಾಸಣೆ ಹಾಗೂ ಸೇನಾ ವಿಚಾರಣೆ ನಡೆಯಲಿದೆ.
https://www.youtube.com/watch?v=ArvRnqPs81s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv