ನಾಗರಪಂಚಮಿಯ ಬಳಿಕ ದೇಶದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಯಾವುದೇ ಶುಭ ಕಾರ್ಯ ಆಗಲಿ, ಅದು ಗಣೇಶನ ಪೂಜೆಯೊಂದಿಗೆ ಆರಂಭವಾಗುತ್ತದೆ. ಗಣೇಶನ ಪೂಜೆ ಮಾಡದೇ ಅದು ಸಫಲವಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಹೀಗಾಗಿ ಗಣೇಶನ ಧಾರ್ಮಿಕ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ. ಹೀಗಾಗಿ ಕರ್ನಾಟಕದ ಪ್ರಮುಖ ಗಣಪತಿ ದೇವಾಲಯಗಳ ಮಾಹಿತಿ ಇಲ್ಲಿದೆ.
ದೊಡ್ಡ ಗಣಪತಿ: ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿಯಲ್ಲಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆ. ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂ ಉದ್ಭವ ಗಣಪ ಎಂತಲೂ ಹೇಳುತ್ತಾರೆ.
Advertisement
ಹಿನ್ನೆಲೆ: ಸುಮಾರು 450 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು 1537 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ, ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡ ನಿರ್ಮಿಸಿದ್ದ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ದೇವಾಲಯವನ್ನು ತನ್ನ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಸೇರಿಸಿದೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ
Advertisement
Advertisement
ಶರವು ಮಹಾಗಣಪತಿ: ಮಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಶರವು ಗಣಪತಿ ದೇವಾಲಯವು ಒಂದಾಗಿದೆ. ಈ ದೇವಾಲಯವನ್ನು ತುಳುನಾಡಿನ ರಾಜ ವೀರಬಾಹು ಕಟ್ಟಿಸಿದ್ದಾನೆ. ಈ ದೇವಾಲಯ ನಿರ್ಮಾಣದ ಹಿಂದೆ ಒಂದು ಕಥೆಯಿದೆ. ಇಲ್ಲಿರುವ ಗಣೇಶ ಸ್ವಯಂ ಉದ್ಭವವಾಗಿದೆ ಹಾಗೂ ಈ ಗಣೇಶ ಶಕ್ತಿಶಾಲಿ ಎಂದು ಹೇಳಲಾಗುತ್ತದೆ.
Advertisement
ಹಿನ್ನೆಲೆ: 800 ವರ್ಷಗಳ ಹಿಂದೆ ಈ ಭಾಗವನ್ನು ಆಳುತ್ತಿದ್ದ ದೊರೆ ವೀರಬಾಹು ಜನ, ಜಾನುವಾರು ಹಾಗೂ ಬೆಳೆ ರಕ್ಷಣೆಗಾಗಿ ಒಮ್ಮೆ ಬೇಟೆಗೆ ಬಂದಾಗ ಹಸುವಿನ ಬಳಿ ಹುಲಿ ನಿಂತಿರುವುದನ್ನು ಕಂಡು ಹುಲಿಯನ್ನು ಕೊಲ್ಲಲು ಬಾಣ ಬಿಡುತ್ತಾನೆ. ಆದರೆ ಅದು ತಪ್ಪಿ ಹಸುವಿಗೆ ತಾಗಿ ಹಸು ಪ್ರಾಣ ಬಿಡುತ್ತದೆ. ಮೊದಲೇ ಮಕ್ಕಳಿಲ್ಲದೆ ಪರಿತಪಿಸುತ್ತಿದ್ದ ಆ ವೀರಬಾಹು ತನ್ನಿಂದ ಗೋಹತ್ಯೆಯೂ ಆಯಿತಲ್ಲ ಎಂದು ಚಿಂತಿಸುತ್ತಾನೆ. ಆಗ ಭರದ್ವಾಜ ಮಹಾಮುನಿಗಳು, ರಾಜ ನೀನು ಉದ್ದೇಶಪೂರ್ವಕವಾಗಿ ಗೋಹತ್ಯೆ ಮಾಡಿಲ್ಲ, ನಿನಗರಿವಿಲ್ಲದೆ ಈ ದುರ್ಘಟನೆ ನಡೆದಿದೆ. ಹೀಗಾಗಿ ನೀನು ನಿನ್ನ ಶರ ಬಿದ್ದ ಜಾಗದಲ್ಲಿ ಶಿವಾಲಯ ಕಟ್ಟಿ ಪೂಜಿಸು, ನಿನ್ನ ಪಾಪ ಪರಿಹಾರವಾಗುತ್ತದೆ ಎಂದು ಸೂಚಿಸಿದರು. ನಾಲ್ಕು ಮೈಲಿ ಚದರಳತೆಯ ವನ ಪ್ರದೇಶದಲ್ಲಿ ರಾಜನ ಶರ ಅಥವಾ ಬಾಣ ಬಿದ್ದ ಕಾರಣ ಈ ಜಾಗಕ್ಕೆ ಶರಪತ್ತು ಅಥವಾ ಶರವು ಎಂಬ ಹೆಸರು ಬಂತು. ಋಷಿಗಳ ಆದೇಶದಂತೆ ರಾಜ, ಅದೇ ಸ್ಥಳದಲ್ಲಿ ಒಂದು ಕೆರೆಯನ್ನು ಹಾಗೂ ಶಿವಾಲಯ ನಿರ್ಮಿಸಿದ.
ಆನೆಗುಡ್ಡೆ ಶ್ರೀ ವಿನಾಯಕ: ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯ ಈ ದೇವಸ್ಥಾನ ಉಡುಪಿಯ ಕುಂದಾಪುರದಲ್ಲಿ ಇದೆ. ಪುರಾಣದಲ್ಲಿ ಈ ದೇಗುಲವನ್ನು ಕುಂಬಾಶಿ ದೇವಾಲಯವೆಂದು ಕರೆಯಲಾಗಿತ್ತು. ಈಗಲೂ ಕೂಡ ಆನೆಗುಡ್ಡೆ ದೇವಾಲಯವನ್ನು ಕುಂಬಾಶಿ ದೇವಾಲಯವೆಂದು ಕರೆಯುತ್ತಾರೆ. ಈ ದೇಗುಲದಲ್ಲಿರುವ ಗಣೇಶ ಸ್ವಯಂಬು ಎಂದು ಹೇಳಲಾಗಿದ್ದು, ಗಣೇಶನ ವಿಗ್ರಹವನ್ನು ಕಲ್ಲಿನಿಂದ ಕೆತ್ತೆನೆ ಮಾಡಲಾಗಿದೆ.
ಹಿನ್ನೆಲೆ: ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ಬರಗಾಲ ಬಂದಾಗ ಅಗಸ್ತ್ಯಮುನಿಗಳು ವರುಣನ ಮನವೂಲಿಸಲು ಯಜ್ಞವೂಂದನ್ನು ಇಲ್ಲಿ ನೆರವೇರಿಸಿದರು. ಈ ಯಜ್ಞವನ್ನು ಭಂಗಗೊಳಿಸಲು `ಕುಂಭಾಸುರ’ ನೆಂಬ ರಾಕ್ಷಸನು ಋಷಿ ಮುನಿಗಳಿಗೆ ಕಿರುಕುಳ ನೀಡುತ್ತಿದ್ದನು. ಋಷಿಗಳನ್ನು ಕಾಪಾಡಲು ಭೀಮ ಗಣೇಶನಿಂದ ವರವಾಗಿ ಪಡೆದಿದ್ದ ಗದೆಯಿಂದ ಕುಂಭಾಸುರನನ್ನು ಸಂಹಾರ ಮಾಡಿದ್ದನು. ಹೀಗಾಗಿ ಈ ಸ್ಥಳಕ್ಕೆ ಕುಂಭಾಶಿ ಎನ್ನುವ ಹೆಸರು ಬಂದಿದೆ.
ಹಟ್ಟಿಯಂಗಡಿ ಸಿದ್ಧಿ ವಿನಾಯಕ: ಹಟ್ಟಿಯಂಗಡಿ ದೇವಾಲಯವೂ ಉಡುಪಿಯಲ್ಲಿದೆ. ಈ ದೇವಾಲಯವೂ ಅಲೂಪ ರಾಜರ ಕಾಲದಲ್ಲಿ ನಿರ್ಮಿಸಲಾಗಿತ್ತು. ಆ ಕಾಲದಲ್ಲೇ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದರು. ಹಟ್ಟಿಯಂಗಡಿ ದೇವಾಲಯ ವರಾಹಿ ನದಿ ದಡದ ಬಳಿ ಇದೆ.
ಹಿನ್ನೆಲೆ: ಈ ದೇವಾಲಯ ಹೇಗಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಈಗಿರುವ ದೇವಾಲಯವನ್ನು ಮೊದಲಿಗೆ 1924ರಲ್ಲಿ ಗಣಪಯ್ಯ ಭಟ್ಟರು ಜೀರ್ಣೋದ್ಧಾರ ಮಾಡಿದ ದಾಖಲೆಗಳಿವೆ. ಕಳೆದ 50 ವರ್ಷಗಳಲ್ಲಿ ದೇವಾಲಯ ಪ್ರಸಿದ್ಧಿಗೆ ಬಂದು ಇಲ್ಲಿ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ. ಹಟ್ಟಿಯಂಗಡಿ ಗಣೇಶ ದೇವಾಲಯ ಪುನರ್ ನಿರ್ಮಾಣಕ್ಕಾಗಿ 1972ರಲ್ಲಿ ರಚಿಸಿದ ಸಮಿತಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತು.
ಇಡಗುಂಜಿ ವಿನಾಯಕ ದೇವಾಲಯ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಈ ದೇವಾಲಯವಿದ್ದು, ಈ ಗ್ರಾಮದಲ್ಲಿ ಸಾಕಷ್ಟು ಪವಾಡಗಳು ಕೂಡ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಈ ಗ್ರಾಮದವರು ಹಾಗೂ ಅಕ್ಕಪಕ್ಕದ ಗ್ರಾಮದವರು ಈ ಗಣೇಶ ಸಾಕಷ್ಟು ಶಕ್ತಿಶಾಲಿ ಎಂದು ನಂಬುತ್ತಾರೆ.
ಹಿನ್ನೆಲೆ: ವಿನಾಯಕನನ್ನು ಇಲ್ಲಿ `ಮಹೋತಭಾರ ಶ್ರೀ ವಿನಾಯಕ’ ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ ‘ದ್ವಿ ಭುಜ’ ಭಂಗಿಯಲ್ಲಿ ಸುಮಾರು 88 ಸೆ.ಮೀ ಎತ್ತರ ಮತ್ತು 59ಸೆ.ಮೀ ಅಗಲವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.
ದ್ವಾಪರ ಯುಗದ ಅಂತ್ಯ ಮತ್ತು ಕಲಿಯುಗದ ಪ್ರಾರಂಭಕ್ಕೆ ನಾಂದಿಯಾದ ದೇವಾಲಯ ಎನ್ನುವ ಪ್ರಸಿದ್ಧ ಇಲ್ಲಿಗೆ ಇದೆ. ಪುರಾಣ ಕಥೆಯ ಪ್ರಕಾರ, ಅವತಾರದ ನಂತರ ಕೃಷ್ಣನು ತನ್ನ ದೈವಿಕ ಮನೆಗೆ ಹಿಂದಿರುಗಲು ಕಲಿಯುಗದ ಪ್ರಾರಂಭದಲ್ಲಿ ಭೂಮಿಯನ್ನು ಬಿಡುವ ಸಂದರ್ಭದಲ್ಲಿ ಜನರು ಹೆದರಿಕೊಳ್ಳುತ್ತಾರೆ. ಹೀಗಾಗಿ ಹೆದರಿದ ಜನರಿಗೆ ಸಾಂತ್ವಾನ ನೀಡಲು ವಾಖಿಲ್ಯರ ನೇತೃತ್ವದಲ್ಲಿ ಋಷಿಮುನಿಗಳು ಗಣೇಶನನ್ನು ಕುರಿತು ಅಡೆತಡೆಗಳನ್ನು ಹೋಗಲಾಡಿಸುವವನು ಎಂಬ ನಿಟ್ಟಿನಲ್ಲಿ ಹೋಮ ಹವನಗಳನ್ನು ಕೈಗೊಳ್ಳುತ್ತಾರೆ. ಇವರ ಭಕ್ತಿ ಮೆಚ್ಚಿ ಸಂತೋಷಗೊಂಡ ಗಣೇಶನು ಅವರಿಗೆ ಮುಂದೆ ಯಾವುದೇ ತೊಂದರೆ ಇಲ್ಲದೆ, ಯಾವುದೇ ಅಡೆತಡೆಗಳು ಬಾರದಂತೆ ಸಹಾಯ ಮಾಡಲು ಈ ಸ್ಥಳದಲ್ಲಿ ನೆಲೆಯೂರಿದನು ಎಂಬ ನಂಬಿಕೆ ಇದೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ: ಈ ದೇವಾಲಯವೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರದ ವಿಶೇಷತೆವೆಂದರೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ ಇಲ್ಲ. ಈ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ, ಧರ್ಮಸ್ಥಳದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಭಕ್ತರು ಈ ದೇವಾಲಯಕ್ಕೆ ಹರಕೆ ರೂಪದಲ್ಲಿ ಗಂಟೆಗಳನ್ನು ನೀಡುವುದು ಇಲ್ಲಿಯ ವಿಶೇಷತೆ.
ಹಿನ್ನೆಲೆ: ಈ ಸ್ಥಳ ಪುರಾಣದ ಪ್ರಕಾರ ಹಿಂದೆ ಈ ಪ್ರಾಂತ್ಯವನ್ನು ಆಳುತ್ತಿದ್ದ ರಾಜಮನೆತನದವರ ಆರಾಧ್ಯ ದೈವವಾದ ಈ ಗಣೇಶನ ದೇವಸ್ಥಾನವು ರಾಜಮನೆತನದವರಿಗೆ ಮಾತ್ರ ಮೀಸಲಾಗಿತ್ತು. ನಂತರ ಈ ಪ್ರಾಂತ್ಯವನ್ನು ಆಕ್ರಮಿಸಿದ ಶತ್ರುಗಳು ಇಡೀ ಪ್ರಾಂತ್ಯ ಹಾಗೂ ರಾಜಮನೆತನವನ್ನೇ ನಾಶ ಮಾಡಿದರು. ಬಹುದಿನಗಳ ಕಾಲ ಕಾಡಿನ ಮಧ್ಯೆ ಮುಚ್ಚಿ ಹೋಗಿದ್ದ ಈ ಗಣಪನ ವಿಗ್ರಹವು ಕೆಲ ದನಗಾಹಿಗಳಿಗೆ ಸಿಕ್ಕಿತು. ಅವರು ಅತ್ಯಂತ ಭಕ್ತಿ ಭಾವದಿಂದ ಆ ಗಣಪತಿಯನ್ನು ತಂದು ಒಂದು ಪ್ರಾಶಸ್ತ್ಯವಾದ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಆ ಗಣಪತಿಗೆ ನೈವೇದ್ಯವಾಗಿ ತಮ್ಮಲ್ಲಿ ಬೆಳೆಯುವ ಸೌತೇಕಾಯಿಯನ್ನು ನಿತ್ಯವೂ ಅರ್ಪಿಸುತ್ತಿದ್ದರು. ಆ ಕಾರಣದಿಂದ ಸ್ಥಳಕ್ಕೆ ಸೌತಡ್ಕ(ಸೌತೆ+ ಅಡ್ಕ: ಅಡ್ಕ ಎಂದರೆ ಬಯಲು ಎಂದರ್ಥ) ಎನ್ನುವ ಹೆಸರು ಬಂದಿದೆ. ಒಂದು ವೇಳೆ ದೇವಾಲಯಕ್ಕೆ ಗರ್ಭಗುಡಿ ಕಟ್ಟಿದರೆ ನಿರ್ಮಾಣ ಕಾರ್ಯ ಒಂದೇ ದಿನದಲ್ಲಿ ಮುಗಿಯಬೇಕು ಮತ್ತು ದೇವಾಲಯ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿ ಕಟ್ಟಿಸಬೇಕೆಂದು ಶಿವ ತನ್ನ ಭಕ್ತರೊಬ್ಬರ ಕನಸಿನಲ್ಲಿ ಹೇಳಿದ ಕಾರಣ ಈ ದೇವಾಲಯಕ್ಕೆ ಗರ್ಭಗುಡಿ ನಿರ್ಮಾಣವಾಗಿಲ್ಲ ಎನ್ನುವ ಕಥೆ ಪ್ರಚಾರದಲ್ಲಿದೆ.
ಮಧೂರು ದೇವಸ್ಥಾನ: ಕಾಸರಗೋಡು ಜಿಲ್ಲೆಯ ಮಧೂರು ಊರಿನಲ್ಲಿ ಗಣಪತಿ ಬಹಳ ಪ್ರಸಿದ್ಧ. ಮಂಗಳೂರಿನಿಂದ ಕಾಸರಗೋಡಿಗೆ ಹೋಗಿ ಅಲ್ಲಿಂದ ಮಧೂರಿಗೆ ಹೋಗಬಹುದು. ಮಳೆಗಾಲದಲ್ಲಿ ನದಿ ನೀರು ದೇವಾಲಯದ ಆವರಣವನ್ನು ಪ್ರವೇಶಿಸುತ್ತದೆ. ಧರ್ಮಗುಪ್ತನೆಂಬ ದೊರೆ, ಕೈಗೊಂಡಿದ್ದ ಅತಿರುದ್ರ ಮಹಾಯಾಗಕ್ಕೆ ಯಾವುದೇ ವಿಘ್ನ ಬಾರಬಾರದೆಂದು ಈ ಗಣೇಶನ ದೇವಾಲಯದಲ್ಲಿ ಮದನಂತೇಶ್ವರ ಲಿಂಗವನ್ನೂ ಪ್ರತಿಷ್ಠಾಪಿಸಿದ್ದ ಎನ್ನುವ ಕಥೆಯಿದೆ. ಹಾಗಾಗಿ ಈ ದೇವಾಲಯವನ್ನು ಮದನಂತೇಶ್ವರ ಸಿದ್ಧಿ ವಿನಾಯಕ ದೇವಾಲಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಾಲಯವನ್ನು ಗಜ ಪೃಷ್ಠ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ.
ಹಿನ್ನೆಲೆ: ಈ ದೇವಾಲಯದಲ್ಲಿ ಮೊದಲು ಹುಲಿ ಹಾಗೂ ಹಸು ಎರಡೂ ಸ್ನೇಹಿತರಾಗಿದ್ದು. ಈ ಪವಾಡ ಕಂಡು ರಾಜ ಇಲ್ಲಿ ದೇವಾಲಯ ನಿರ್ಮಿಸಿದನೆಂಬ ಕಥೆಯೂ ಇದೆ. ಇವರ ಸ್ನೇಹಕ್ಕೆ ಸಾಕ್ಷಿಯಾಗಿ ಹುಲಿ ಕಲ್ಲು ದೇವಾಲಯದಲ್ಲಿದೆ. ಈ ದೇವಾಲಯದಲ್ಲಿ ವಿಶಾಲವಾದ ವಿನ್ಯಾಸವೇ ಆಕರ್ಷಕವಾಗಿದ್ದು, ಸುಂದರ ಕೆತ್ತನೆಗಳನ್ನು ಮಾಡಲಾಗಿದೆ. ಅಲ್ಲದೇ ಈ ದೇವಾಲಯದ ಮೇಲ್ಛಾವಣಿಯಲ್ಲಿ ರಾಮಾಯಣದ ಕೆಲವು ಪ್ರಸಂಗಗಳು ಕೂಡ ಇದೆ. ಸುಮಾರು 650 ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv