ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ನೇಹ ಶುರುವಾಗಿದ್ದು ಹೇಗೆ ಎಂಬ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.
ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಅದು ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರೋ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಅವರು ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು. ಹೀಗೆ ನಾಗರಹಾವು ಸಿನಿಮಾ ಸೆಟ್ ನಲ್ಲಿ ವಿಷ್ಣು ಹಾಗೂ ಅಂಬರೀಶ್ ಮೊದಲ ಭೇಟಿಯಾಗಿತ್ತು.
ವಿಷ್ಣುವರ್ಧನ್ ಮೊದಲಿನಿಂದಲೂ ಸ್ವಲ್ಪ ಹ್ಯೂಮರಸ್ ವ್ಯಕ್ತಿತ್ವದವರು. ಹೀಗಾಗಿ, ಅಂಬರೀಶ್ ಗೆ ಬಹಳ ಬೇಗನೆ ಹತ್ತಿರವಾದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್ ನಿಭಾಯಿಸಿದ್ದರು. ಆದರೆ ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗೋದಕ್ಕೆ ಈ ಚಿತ್ರವೂ ಕಾರಣವಾಯ್ತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್ ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ನೋಡುಗರಿಗೆ ಖುಷಿ ಕೊಟ್ಟಿತ್ತು.
ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅಂಬರೀಶ್ ಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದು ನಕ್ಕು ನಲಿಸುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ. ಚಿತ್ರದುರ್ಗದಲ್ಲಿ ನಾಗರಹಾವು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ಮಲಗುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ವಿಷ್ಣು ಹಾಗೂ ಅಂಬರೀಶ್ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತು ಆಗ ಅಂಬರೀಶ್ ವಿಷ್ಣು ಮನೆಗೆ ಹೋಗುತ್ತಿದ್ದರು.
ನಾಗರಹಾವು ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಮೊದಲ ಪ್ರಿಂಟ್ ಮದ್ರಾಸ್ ನ ಖಾಸಗಿ ಚಿತ್ರ ಮಂದಿರವೊಂದರಲ್ಲಿ ಪ್ರದರ್ಶನವಾಗಿತ್ತು. ಮದ್ರಾಸ್‍ನ ನಿರ್ಮಾಪಕರು, ನಿರ್ದೇಶಕರು ಅದಾಗಲೇ ಚಿತ್ರವನ್ನು ನೋಡಿ ಅದ್ಭುತ ಎಂದು ಹೇಳಿದ್ದರು. ನಿರ್ಮಾಪಕರ ಹಾಗೂ ನಿರ್ದೇಶಕರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ವಿಷ್ಣುವರ್ಧನ್ ಅಲ್ಲಿ ಇರಲಿಲ್ಲ. ಆಗ ಈ ಸುದ್ದಿಯನ್ನು ಅಂಬರೀಶ್ ಮೊದಲು ವಿಷ್ಣುವರ್ಧನ್ ಅವರಿಗೆ ತಿಳಿಸಿದ್ದರು.
ವಿಷ್ಣುವರ್ಧನ್ ಅವರಿಗೆ ಸಿನಿಮಾ ಬಗ್ಗೆ ತುಂಬಾ ಭಯವಿತ್ತು. ಚಿತ್ರ ಬಿಡುಗಡೆಯಾದಾಗ ಮುಂದೆ ಏನಾಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ರೀರೆಕಾರ್ಡಿಂಗ್ ಮುಗಿದು, ಸಿನಿಮಾ ಬಿಡುಗಡೆಯಾಯಿತು. ಅಂಬರೀಶ್ ಹಾಗೂ ವಿಷ್ಣು ಖುದ್ದಾಗಿ ಎಲ್ಲಾ ಚಿತ್ರಮಂದಿರಗಳಿಗೂ ಹೋಗಿ ಜನರ ಪ್ರತಿಕ್ರಿಯೆ ನೋಡಿಕೊಂಡು ಬರುತ್ತಿದ್ದರು. ನಾಗರ ಹಾವು ಸಿನಿಮಾ ಮೂಲಕ ಒಬ್ಬ ಹೀರೋ ಹಾಗೇ ಒಬ್ಬ ವಿಲನ್ ಪಾತ್ರಧಾರಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇಬ್ಬರಲ್ಲೂ ಅಸಾಧಾರಣವಾದ ಪ್ರತಿಭೆ ಇತ್ತು.
ನಾಗರಹಾವು ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಇಬ್ಬರೂ ಸಖತ್ ಥ್ರಿಲ್ ಆಗಿದ್ದರು. ಕೇವಲ ಸೆಟ್‍ನಲ್ಲಷ್ಟೇ ಅಲ್ಲ. ಇನ್ನೂ ಮುಂದುವರಿದು ನಮ್ಮ ಸ್ನೇಹ ಎಂಥದ್ದು ಎನ್ನುವುದ್ದಕ್ಕೆ ಅಂಬರೀಶ್ ಮತ್ತು ವಿಷ್ಣು ಸಾಧಿಸಿದ್ದರು. ನಾಗರಹಾವು ಆರಂಭವಾಗಿದ್ದ ಸ್ನೇಹ ಮುಂದೆ ಆಫ್ ಸ್ಕ್ರೀನ್ ನಲ್ಲಿ ವಿಷ್ಣು ಅಂಬಿ ಒಬ್ಬರನೊಬ್ಬರು ಬಿಟ್ಟು ಇರುತ್ತಿರಲಿಲ್ಲ. 1973ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾ ಬೆಂಗಳೂರಿನ ಮೂರು ಥಿಯೇಟರ್ ಗಳಲ್ಲಿ ಜಯಭೇರಿ ಬಾರಿಸಿತ್ತು. ಈಗ ಮತ್ತೆ ಸಿನಿಮಾ ರೀ-ರಿಲೀಸ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv