ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಪ್ರತಿ ತಿಂಗಳು ಹಬ್ಬಗಳು ಬರುತ್ತಿರುತ್ತವೆ. ಸಂಕ್ರಾಂತಿ ಹಬ್ಬದ ನಂತರ ಎಲ್ಲರೂ ಶಿವನನ್ನು ಆರಾಧಿಸುತ್ತಾರೆ. ಸೋಮವಾರ ಎಲ್ಲೆಡೆ ಶಿವನನ್ನು ಪೂಜಿಸುತ್ತಾರೆ. ಅಂದು ಭಕ್ತರು ಶಿವನಿಗಾಗಿ ಜಾಗರಣೆಯನ್ನು ಮಾಡುತ್ತಾರೆ. ಜಗತ್ತಿನಾದ್ಯಂತ ಶಿವನ ಭಕ್ತರಿದ್ದು, ಶಿವನ ಮೂರ್ತಿಗಳು ಇದೆ. ಕರ್ನಾಟಕದಲ್ಲಿ ಮುರುಡೇಶ್ವರ, ಭಾರತದಲ್ಲಿ ಹಲವು ಕಡೆ ಶಿವನ ಮೂರ್ತಿಗಳನ್ನು ಕಾಣಬಹುದಾಗಿದೆ. ಶಿವನ ಮೂರ್ತಿ ಅಷ್ಟೇ ಅಲ್ಲದೇ ಶಿವನ ಪ್ರತೀಕವಾಗಿ ಶಿವಲಿಂಗವನ್ನು ಜನರು ಪೂಜೆ ಮಾಡುತ್ತಾರೆ.
ಜಗತ್ತಿನಲ್ಲಿರುವ ಅತೀ ಎತ್ತರದ ಶಿವನ ಮೂರ್ತಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ….
Advertisement
Advertisement
1. ಕೈಲಾಸನಾಥ ಮಹಾದೇವ
ಸ್ಥಳ – ನೇಪಾಳ
ಎತ್ತರ – 143 ಅಡಿ
ನಿರ್ಮಾಣ – 2011
ಜಗತ್ತಿನ ಎತ್ತರದಲ್ಲಿ 1ನೇ ಸ್ಥಾನ
Advertisement
ನೆರೆ ರಾಷ್ಟ್ರ ನೇಪಾಳದಲ್ಲಿ ಅತಿ ಎತ್ತರದ ಶಿವನ ಮೂರ್ತಿ ಇದೆ. ಭಕ್ತಾಪುರ್ ಜಿಲ್ಲೆಯ ಸಾಂಗ ಪ್ರದೇಶದಲ್ಲಿ ಕೈಲಾಸನಾಥ ಮಹಾದೇವನಾಗಿ ಪರಶಿವನು ನೆಲೆಸಿದ್ದಾನೆ. ನಿಂತ ಭಂಗಿಯಲ್ಲಿರುವ ಪರಶಿವನ ಮೂರ್ತಿಯನ್ನು ತಾಮ್ರ, ಜಿಂಕ್, ಸಿಮೆಂಟ್ ಮತ್ತು ಉಕ್ಕಿನಿಂದ ತಯಾರಿಸಲಾಗಿದೆ. 143 ಅಡಿ ಎತ್ತರವಿರುವ ಈ ಶಿವನ ಮೂರ್ತಿಯನ್ನು ಜೂನ್ 21, 2011 ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಇದು ಜಗತ್ತಿನ ಅತಿ ಎತ್ತರ ಶಿವನ ಮೂರ್ತಿಯಾಗಿದ್ದು, 1ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ದೇಶದಲ್ಲಿರುವ ಪ್ರಸಿದ್ಧ ಶಿವಲಿಂಗ ದೇವಾಲಯಗಳು
Advertisement
ನೇಪಾಳದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಹಿಂದೂ ದೇವಾಲಯಗಳು ಕೂಡ ನೇಪಾಳದಲ್ಲಿ ಹೆಚ್ಚಾಗಿವೆ. ಹೀಗಾಗಿ ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ ಪರಶಿವನನ್ನು ನೇಪಾಳದಲ್ಲಿ ಪ್ರತಿಷ್ಠಾಪಿಸಿದ್ದಾರೆ.
2. ಮುರುಡೇಶ್ವರದ ಶಿವ ಮೂರ್ತಿ
ಸ್ಥಳ – ಮುರುಡೇಶ್ವರ, ಕರ್ನಾಟಕ
ಎತ್ತರ – 122 ಅಡಿ
ಜಗತ್ತಿನ ಎತ್ತರದಲ್ಲಿ 2ನೇ ಸ್ಥಾನ
ಇನ್ನು ಕರ್ನಾಟಕದ ಪವಿತ್ರ ಕ್ಷೇತ್ರವಾದ ಮುರುಡೇಶ್ವರದಲ್ಲೂ ಆಕಾಶದೆತ್ತರಕ್ಕೆ ಶಿವ ನೆಲೆಸಿದ್ದಾನೆ. ಶಿವನ ಆತ್ಮಲಿಂಗ ಗೋಕರ್ಣದಲ್ಲಿ ಭೂಸ್ಪರ್ಶವಾದಾಗ ರಾವಣ ಸಿಟ್ಟಿಗೆದ್ದು ಆತ್ಮಲಿಂಗವನ್ನು ಛಿದ್ರಗೊಳಿಸಿ ಎಸೆಯುತ್ತಾನೆ. ಆ ವೇಳೆ ಶಿವನ ಆತ್ಮಲಿಂಗದ ಒಂದು ಭಾಗ ಮುರುಡೇಶ್ವರದಲ್ಲಿ ಬೀಳುತ್ತದೆ. ಅದೇ ಮುರುಡೇಶ್ವರ ಶಿವನಾಗಿ ಖ್ಯಾತಿ ಪಡೆದುಕೊಂಡಿದೆ. ಹೀಗಾಗಿ ಇಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಸಮುದ್ರ ತೀರದಲ್ಲಿ ತಪೋನಿರತನಾಗಿರುವಂತೆ ಕಾಣುವ, ಆಕಾಶದೆತ್ತರದ ಶಿವನ ಮೂರ್ತಿ ನೋಡುಗರನ್ನು ಮನಸೆಳೆಯುತ್ತದೆ. ಇದು 122 ಅಡಿ ಎತ್ತರವಿದ್ದು, ಭಾರತದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಇನ್ನು ಜಗತ್ತಿನಾದ್ಯಂತ ಇರುವ ಶಿವನ ಮೂರ್ತಿಗಳಿಗೆ ಹೋಲಿಸಿದರೆ ಮುರುಡೇಶ್ವರದ ಶಿವನ ಮೂರ್ತಿ 2ನೇ ಸ್ಥಾನವನ್ನು ಪಡೆದುಕೊಂಡಿದೆ.
3. ನಾಂಚಿ ಶಿವಮೂರ್ತಿ
ಸ್ಥಳ – ಸಿದ್ದೇಶ್ವರ ಧಾಮ, ಸಿಕ್ಕಿಂ
ಎತ್ತರ – 108 ಅಡಿ
ಜಗತ್ತಿನ ಎತ್ತರದಲ್ಲಿ 3ನೇ ಸ್ಥಾನ
ಭಾರತದಲ್ಲಿರುವ ಸಿಕ್ಕಿಂ ಪ್ರದೇಶದಲ್ಲೂ ಎತ್ತರದ ಶಿವನ ಮೂರ್ತಿ ಇದೆ. ಇಲ್ಲಿನ ಸಿದ್ದೇಶ್ವರ ಧಾಮದಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 2011ರಲ್ಲಿ ಈ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಬರೋಬ್ಬರಿ 108 ಅಡಿ ಎತ್ತರವಿದೆ. ಬೃಹದಾಕಾರವಾದ ಈ ಶಿವನ ಮೂರ್ತಿ ಜಗತ್ತಿನ 3ನೇ ಅತಿ ಎತ್ತರದ ಮೂರ್ತಿಯಾಗಿದೆ. ಶಿವಾರಾಧಕರು, ಪ್ರವಾಸಿಗರು ಸೇರಿದಂತೆ, ದಿನಕ್ಕೆ ಸಾವಿರಾರು ಮಂದಿ ಇಲ್ಲಿಗೆ ಬಂದು ಶಿವನ ದರ್ಶನ ಪಡೆಯುತ್ತಾರೆ.
4. ಮಂಗಲ್ ಮಹಾದೇವ
ಸ್ಥಳ – ಮಾರಿಷಸ್ ಗಣರಾಜ್ಯ
ಎತ್ತರ – 108 ಅಡಿ
ನಿರ್ಮಾಣ – 2007
ಜಗತ್ತಿನ ಎತ್ತರದಲ್ಲಿ 4ನೇ ಸ್ಥಾನ
ಮಾರೀಷಸ್ ನಲ್ಲಿ ಮಂಗಲ್ ಮಹಾದೇವ ಎಂಬ ಹೆಸರಿನಲ್ಲಿ ಶಿವ ನೆಲೆಸಿದ್ದಾನೆ. 1893 ರಲ್ಲಿ ಹಿಂದೂ ಪೂಜಾರಿಯೊಬ್ಬರಿಗೆ ಬಿದ್ದ ಕನಸು ಈ ದೇವಾಲಯ ನಿರ್ಮಾಣಕ್ಕೆ ಕಾರಣವಾಗಿದೆ. ಹಿಂದೂಗಳೇ ಹಣ ಹಾಕಿ ನಿರ್ಮಾಣ ಮಾಡಿದ ಈ ಮಂಗಲ್ ಮಹಾದೇವನ ಮೂರ್ತಿಯನ್ನು 2007 ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. 108 ಅಡಿ ಎತ್ತರವಿರುವ ಈ ಶಿವನ ಮೂರ್ತಿ ಜಗತ್ತಿನ 4ನೇ ಅತ್ಯಂತ ಎತ್ತರದ ಶಿವನ ಮೂರ್ತಿಯಾಗಿದೆ.
5. ಪುರಿಯಲ್ಲಿ ನೆಲೆನಿಂತ ಹರ
ಸ್ಥಳ – ಹರಿದ್ವಾರ, ಉತ್ತರಾಖಂಡ್
ಎತ್ತರ – 100 ಅಡಿ
ಜಗತ್ತಿನ ಎತ್ತರದಲ್ಲಿ 5ನೇ ಸ್ಥಾನ
ಹರಿದ್ವಾರ ಪೌರಾಣಿಕ ಕ್ಷೇತ್ರವಾಗಿದ್ದು, ಹೆಸರೇ ಹೇಳುವಂತೆ ಇದು ಹರಿ ನೆಲೆಸಿದ ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿ ಹರನನ್ನು ಕೂಡ ಪೂಜಿಸಲಾಗುತ್ತೆ. ಈ ಕ್ಷೇತ್ರದಲ್ಲಿ ಹರನನ್ನು ಪೂಜಿಸುವುದರಿಂದ, ಹರ್ ಕಿ ಪುರಿ ಅಂತ ಕರಿಯುತ್ತಾರೆ. ಋಶಿಕೇಶ್ ಮತ್ತು ಹರಿದ್ವಾರಕ್ಕೆ ಸಾಗುವ ಮಾರ್ಗದಲ್ಲಿ ಗಂಗಾ ನದಿಯ ತಟದಲ್ಲಿ ಶಿವ ನೆಲೆಸಿದ್ದಾನೆ. ನಿಂತ ಭಂಗಿಯಲ್ಲಿರುವ ಶಿವನ ಎತ್ತರ ಬರೋಬ್ಬರಿ 100 ಅಡಿ ಇದ್ದು, ಕೈಯಲ್ಲಿ ತ್ರಿಶೂಲವಿದೆ. ಆಕಾಶದೆತ್ತರಕ್ಕೆ ಇರುವ ಈ ಶಿವನ ಮೂರ್ತಿ, ಜಗತ್ತಿನ 5ನೇ ಎತ್ತರದ ಶಿವನ ಮೂರ್ತಿಯಾಗಿದೆ.
6. ಶಿವಗಿರಿ ಶಿವಮೂರ್ತಿ
ಸ್ಥಳ – ಬಿಜಾಪುರ, ಕರ್ನಾಟಕ
ಎತ್ತರ – 85 ಅಡಿ
ನಿರ್ಮಾಣ – ಫೆ. 26, 2006
ಜಗತ್ತಿನ ಎತ್ತರದಲ್ಲಿ 6ನೇ ಸ್ಥಾನ
ಕರ್ನಾಟಕದ ಬಿಜಾಪುರದಲ್ಲೂ ಪರಶಿವ ನೆಲೆಸಿದ್ದಾನೆ. ಟಿ.ಕೆ ಪಾಟೀಲ್ ಬನಕಟ್ಟಿ ಟ್ರಸ್ಟ್ ವತಿಯಿಂದ 2006 ರಲ್ಲಿ ಈ ಶಿವನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಿಜಾಪುರದಲ್ಲಿರುವ ಈ ಶಿವನ ಮೂರ್ತಿ ಬರೋಬ್ಬರಿ 85 ಅಡಿ ಉದ್ದ ಇದ್ದು, ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ ಇದು 6ನೇ ಸ್ಥಾನವನ್ನು ಪಡೆದಿದೆ.
7. ನಾಗೇಶ್ವರ ದೇವಾಲಯ
ಸ್ಥಳ – ದ್ವಾರಕ, ಗುಜರಾತ್
ಎತ್ತರ – 82 ಅಡಿ
ಜಗತ್ತಿನ ಎತ್ತರದಲ್ಲಿ 7ನೇ ಸ್ಥಾನ
ಇದು ಹಿಂದೂಗಳ ಪವಿತ್ರ ಭೂಮಿಯಾದ ಗುಜರಾತ್‍ನ ದ್ವಾರಕದಲ್ಲಿದೆ. ಇಲ್ಲಿ ನಾಗೇಶ್ವರ ಎಂಬ ಹೆಸರಿನಲ್ಲಿ ಸಾಕ್ಷಾತ್ ಪರಶಿವನು ನೆಲೆಸಿದ್ದಾನೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಕುರಿತು ಶಿವ ಪುರಾಣದಲ್ಲಿ ಉಲ್ಲೇಖವಾಗಿದೆ. ಇಲ್ಲೆ ಜ್ಯೋತಿರ್ಲಿಂಗಗಳ ದರ್ಶನದ ಜೊತೆಗೆ 82 ಅಡಿ ಎತ್ತರವಿರುವ ಶಿವನ ಮೂರ್ತಿಯ ದರ್ಶನವನ್ನು ಪಡೆಯಬಹುದು. ಇಲ್ಲಿ ನೆಲೆಸಿರುವ ಶಿವನ ಮೂರ್ತಿ ಜಗತ್ತಿನ 7ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
8. ಜಬಲ್‍ಪುರ್ ಶಿವಾಲಯ
ಸ್ಥಳ – ಕಚ್ನಾರ್, ಮಧ್ಯಪ್ರದೇಶ
ಎತ್ತರ – 76 ಅಡಿ
ಜಗತ್ತಿನ ಎತ್ತರದಲ್ಲಿ 8ನೇ ಸ್ಥಾನ
ಇದು ಮಧ್ಯಪ್ರದೇಶದ ಜಬಲ್ ಪುರದಲ್ಲಿರುವ ಶಿವಾಲಯ. 2006 ರಲ್ಲಿ ಇಲ್ಲಿನ ಕಚ್ನಾರ್ ನಗರದಲ್ಲಿ ಈ ಬೃಹತ್ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 76 ಅಡಿ ಎತ್ತರವಿರುವ ಈ ಶಿವನ ಮೂರ್ತಿ, ಜಗತ್ತಿನ 8ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ. ಜೊತೆಗೆ 12 ಜ್ಯೋತಿರ್ಲಿಂಗಗಳನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಾಂತಚಿತ್ತನಾಗಿ, ತಪೋನಿರತನಾಗಿರುವ ಶಿವನನ್ನು ನೋಡುವುದಕ್ಕೆ ಲಕ್ಷಾಂತರ ಮಂದಿ ಇಲ್ಲಿಗೆ ಬಂದು ಶಿವನ ಆಶೀರ್ವಾದ ಪಡೆದು ಪಾವನರಾಗುತ್ತಾರೆ.
9. ಗೌರಿಶಂಕರ ದೇವಾಲಯ
ಸ್ಥಳ – ನವದೆಹಲಿ
ಎತ್ತರ – 74 ಅಡಿ
ಜಗತ್ತಿನ ಎತ್ತರದಲ್ಲಿ 9ನೇ ಸ್ಥಾನ
ಇದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಶಿವಾಲಯ. ಇಲ್ಲಿ ಪ್ರತಿಷ್ಠಾನೆಯಾಗಿರುವ ಶಿವನಿಗೆ ಸುಮಾರು 800 ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಲಕ್ಷಾಂತರ ಮಂದಿ ಭಕ್ತರು ಬಂದು ಶಿವನ ದರ್ಶನವನ್ನು ಪಡೆಯುತ್ತಾರೆ. ವಿಶೇಷ ಅಂದರೆ ಶಿವರಾತ್ರಿ ಹಬ್ಬದಂದು ಭಕ್ತರು ನಾನಾ ಕಡೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ಈ ಶಿವನ ಮೂರ್ತಿ 74 ಅಡಿ ಎತ್ತರವಿದ್ದು, ಜಗತ್ತಿನಲ್ಲಿರುವ ಅತಿ ಎತ್ತರದ ಶಿವನ ಮೂರ್ತಿಗಳಲ್ಲಿ 9ನೇ ಸ್ಥಾನವನ್ನು ಪಡೆದಿದೆ.
10. ಕೆಂಪ್ ಫೋರ್ಟ್ ಶಿವನ ದೇವಾಲಯ
ಸ್ಥಳ – ಬೆಂಗಳೂರು
ಎತ್ತರ – 65 ಅಡಿ
ಜಗತ್ತಿನ ಎತ್ತರದಲ್ಲಿ 10 ನೇ ಸ್ಥಾನ
ಬೆಂಗಳೂರಿನಲ್ಲಿರುವ ಈ ಕೆಂಪ್ ಫೋರ್ಟ್ ಶಿವನ ಮೂರ್ತಿ ಕೂಡ ಜಗತ್ತಿನ ಎತ್ತರದ ಶಿವಮೂರ್ತಿಗಳಲ್ಲಿ ಒಂದಾಗಿದೆ. ಶಿವರಾತ್ರಿ ಬಂತು ಅಂದರೆ ಸಾಕು ಅಪಾರ ಸಂಖ್ಯೆಯ ಭಕ್ತರು ಬಂದು ಅತಿ ಎತ್ತರ ಶಿವನನ್ನು ಪೂಜಿಸುತ್ತಾರೆ. ಶಿವ 1993 ರಲ್ಲಿ ವ್ಯಕ್ತಿಯೊಬ್ಬರ ಕನಸಲ್ಲಿ ಬಂದು ಬೆಂಗಳೂರಿನ ಕೆಂಪ್‍ಫೋರ್ಟ್ ನಲ್ಲಿ ದೇವಾಲಯ ಕಟ್ಟುವಂತೆ ಹೇಳಿದ್ದನಂತೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ 65 ಅಡಿ ಎತ್ತರದ ಶಿವನ ಮೂರ್ತಿಯನ್ನು ಕೆಂಪ್ ಪೋರ್ಟ್ ನಲ್ಲಿ ಪ್ರತಿಷ್ಠಾಪಿಸಿದ್ದಾರೆ. ಜಗತ್ತಿನಲ್ಲಿರೋ ಶಿವನ ಮೂರ್ತಿಗಳಿಗೆ ಹೋಲಿಸಿದರೆ ಕೆಂಪ್ ಫೋರ್ಟ್ ನಲ್ಲಿರುವ ಶಿವನ ಮೂರ್ತಿ 10ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
11. ಬೇಲೆಶ್ವರ ಮಹಾದೇವ
ಸ್ಥಳ – ಒಡಿಶಾ
ಎತ್ತರ – 61 ಅಡಿ
ನಿರ್ಮಾಣ – ಮಾರ್ಚ್ 6, 2013
ಜಗತ್ತಿನ ಎತ್ತರದಲ್ಲಿ 11ನೇ ಸ್ಥಾನ
ಬೇಲೆಶ್ವರ ಮಹಾದೇವ ಶಿವನ ದೇವಾಲಯ ಒಡಿಶಾದ ಬಂಜಾನಗರ್ ಪ್ರದೇಶದಲ್ಲಿ ಇದೆ. ಇಲ್ಲಿ ನೆಲಸಿರುವ ಶಿವನನ್ನು ಇಲ್ಲಿನ ಜನರು ಬೇಲೆಶ್ವರ ಮಹಾದೇವ ಎಂದು ಭಕ್ತರು ಪೂಜಿಸುತ್ತಾರೆ. ಈ ಶಿವನ ಮೂರ್ತಿ ಸುಮಾರು 61 ಅಡಿ ಎತ್ತರವಿದ್ದು, ಇದನ್ನು ಮಾರ್ಚ್ 6, 2013 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಜಗತ್ತಿನ 11ನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv