ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿದ್ದರು. ಆ ಬಳಿಕ ಪ್ರಾಥಮಿಕ ಶಿಕ್ಷಣ, ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಕಾಫಿರಾಜನಾದ ಕಥೆಯನ್ನೊಮ್ಮೆ ನೀವು ಓದಲೇ ಬೇಕು.
ಸಿದ್ಧಾರ್ಥ್ ಹೆಗ್ಡೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿ ದಂಪತಿಯ ಏಕೈಕ ಪುತ್ರ. ಚಿಕ್ಕಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದು, 1993-84ರಲ್ಲಿ ಮುಂಬೈನ ಜೆ.ಎಂ ಫೈನಾನ್ಸಿಯಲ್ ಲಿಮಿಟೆಡ್‍ನಲ್ಲಿ ಕೆಲಸಕ್ಕೆ ಸೇರಿಕೊಂಡರು.
Advertisement
Advertisement
ಬಳಿಕ ಮಹೇಂದ್ರ ಕಂಪನಿಯ ಮ್ಯಾನೆಜ್ಮೆಂಟ್‍ನ ಸೆಕ್ಯೂರಿಟಿ ವಹಿವಾಟಿನಲ್ಲಿ ತರಬೇತಿದಾರನಾಗಿ ಕೆಲಸ ಮಾಡಿದ್ದರು. 2 ವರ್ಷಗಳ ಬಳಿಕ ಅಲ್ಲಿಂದ ವಾಪಸ್ ಬಂದು ತಂದೆ ಬಳಿ 2 ಲಕ್ಷ ಹಣ ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ನಷ್ಟವಾದ ಬಳಿಕ ಮತ್ತೆ ಅಪ್ಪನ ಬಳಿ ಬ್ಯುಸಿನೆಸ್‍ಗಾಗಿ 5 ಲಕ್ಷ ಹಣ ಕೇಳಿದ್ದರು. ಆಗ ಅವರ ತಂದೆ 2 ಲಕ್ಷ ಹಾಳು ಮಾಡಿದ್ದೀಯಾ ಎಂದು ಜರಿದಿದ್ದರು. ಬ್ಯಾಂಕಿನಲ್ಲಿ ಸಾಲ ಹಾಗೂ ಕಾಫಿ ತೋಟ ಮಾರಿ 5 ಲಕ್ಷ ಹಣ ಕೊಟ್ಟಿದ್ದರು.
Advertisement
Advertisement
ಅಪ್ಪ ಕಷ್ಟದ ಮಧ್ಯೆಯೂ ತಂದು ಕೊಟ್ಟ ಆ ಹಣ ಸಿದ್ದಾರ್ಥ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. 1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.
1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ನಡೆದಾಡುವ ದೈವ ಆಗಿದ್ದರು.
ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು.