ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

Public TV
2 Min Read
Ram Mandir 1 e1570442071862

ನವದೆಹಲಿ: ಹಿಂದೂಗಳ ಪರವಾಗಿ ಅಯೋಧ್ಯೆ ತೀರ್ಪು ಬಂದಾಗಿದ್ದು, ಇನ್ನಿರುವುದು ರಾಮಮಂದಿರ ನಿರ್ಮಾಣ. ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ, ಮಾದರಿ ಸಜ್ಜಾಗಿದೆ. ಜೊತೆಗೆ ಸ್ತಂಭ-ಸ್ತೂಪಗಳು, ಗೋಪುರಗಳನ್ನು ಈಗಾಗಲೇ ಸಿದ್ಧಗೊಂಡಿವೆ.

ರಾಮ ಜನ್ಮ ಭೂಮಿಯಿಂದ 3 ಕಿ.ಮೀ ದೂರದಲ್ಲಿರುವ ಕರಸೇವಕಪುರಂನ ಕಾರ್ಯ ಶಾಲೆಯಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲ್ಪ ಕೆತ್ತನೆ ನಡೆಯುತ್ತಿದೆ. 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿದ್ದು, ನಿರಂತರವಾಗಿ ನಡೆದುಕೊಂಡು ಬಂದಿದೆ.

Ayodhya temple D

ರಾಮಮಂದಿರ ವಿನ್ಯಾಸ ಹೇಗಿದೆ?:
ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು-ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ. ಒಂದು ಮಹಡಿಯ ರಾಮ ಮಂದಿರ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧವಾಗಿದೆ. ಅದರಂತೆ ನೆಲ ಮಹಡಿಯಲ್ಲಿ 106 ಕಂಬಗಳ ನಿರ್ಮಾಣವಾಗಲಿದ್ದು, ಒಂದೊಂದು ಕಂಬವು 15.6 ಅಡಿ ಉದ್ದ ಇರಲಿವೆ. ಅದೇ ರೀತಿ ಮೊದಲ ಮಹಡಿಯಲ್ಲೂ 14.6 ಅಡಿ ಉದ್ದದ 106 ಕಂಬಗಳ ನಿರ್ಮಾಣವಾಗಲಿವೆ. ಪ್ರತಿಕಂಬದಲ್ಲಿ 16 ಮೂರ್ತಿಗಳ ಕೆತ್ತನೆ ಇರಲಿದೆ.

ನೆಲಮಹಡಿಯ ಒಂದು ಭಾಗದಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ನಿರ್ಮಾಣ ಹಾಗೂ ಮೊದಲ ಮಹಡಿಯಲ್ಲಿ ರಾಮನ ದರ್ಬಾರ್ ಮೂರ್ತಿ (ರಾಮ-ಸೀತೆ-ಲಕ್ಷಣ ಮತ್ತು ಹನುಮಂತ) ನಿರ್ಮಿಸಲಾಗುತ್ತದೆ. ಮೊದಲ ಮಹಡಿಯ ಎದುರಿನ ಭಾಗ 140 ಅಡಿ ಹಾಗೂ ಬಲಭಾಗ 268 ಅಡಿ ಇರಲಿದೆ. ಹಿಂದಿನ ಭಾಗದ ನೆಲ ಮಹಡಿ 18 ಅಡಿ ಮತ್ತು ಮೊದಲ ಮಹಡಿಯ ಒಂದು ಭಾಗ 15.9 ಅಡಿ ಇರಲಿದೆ. ರಾಮ ಮಂದಿರಕ್ಕೆ ಒಟ್ಟು 24 ಬಾಗಿಲುಗಳಿವೆ.

vlcsnap 2019 11 09 17h51m44s716

ಮೊದಲ ಮಹಡಿಯ ಹಾಸಿನಿಂದ ಧ್ವಜಸ್ತಂಭದವರೆಗೆ 65.3 ಅಡಿ ಗೋಪುರವಿದೆ. ಮತ್ತೊಂದು ಗೋಪುರವು 128 ಅಡಿ ನೆಲದಿಂದ ಗೋಪುರದ ತುತ್ತತುದಿವರೆಗೆ ಇದೆ. ಮಂದಿರದಲ್ಲಿ 6 ಭಾಗದಲ್ಲಿ ಸಿಂಹದ್ವಾರ, ಕೋಲಿ, ನೃತ್ಯ ಮಂಟಪ, ಗರ್ಭಗುಡಿ, ರಂಗಮಂಟಪ ಇರಲಿದೆ.

ದೇವಾಲಯದ ಜೊತೆಗೆ ವಸ್ತುಪ್ರದರ್ಶನ, ಐತಿಹಾಸಿಕ ಕೇಂದ್ರವನ್ನೂ ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ವಿಷ್ಣುವಿನ ದಶಾವತಾರ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗುತ್ತದೆ. ಈ ಅಂಶಗಳೆಲ್ಲವೂ ನೀಲಿನಲ್ಲಿದ್ದು, ಶಿಲ್ಪ ಕೆತ್ತನೆ ಕೆಲಸ ಭರದಿಂದ ಸಾಗಿದೆ.

Ayodhya temple E

ಕಾರ್ಯಶಾಲೆ ಇತಿಹಾಸ:
ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ 1989ರ ನವೆಂಬರ್ 10ರಂದೇ ನಡೆದಿತ್ತು. ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1990ರಿಂದಲೇ ಕಾರ್ಯಶಾಲೆಯಲ್ಲಿ ಕೆತ್ತನೆ ಕಾರ್ಯ ಆರಂಭವಾಗಿತ್ತು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದಿಂದಾಗಿ ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದ್ದರೂ ಕೆತ್ತನೆ ಕಾರ್ಯ ಮುಂದುವರಿದಿತ್ತು.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗಲೂ ರಾಜಸ್ಥಾನ ಮತ್ತು ಗುಜರಾತ್‍ಗಳಿಂದ ಕಲ್ಲುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕೆತ್ತನೆ ಕಾರ್ಯ ಮುಂದುವರಿದಿತ್ತು. ಆದರೆ ಇತ್ತೀಚೆಗೆ ಕಾರ್ಯಶಾಲೆಯ ಪ್ರಧಾನ ಶಿಲ್ಪಿ ನಿಧನರಾದ ಬಳಿಕ ಕಾರ್ಯಗಳು ಸ್ಥಗಿತವಾಗಿದ್ದವು. ಈಗಾಗಲೇ ಶೇ.65ರಷ್ಟು ಕಾರ್ಯವು ಪೂರ್ಣಗೊಂಡಿದೆ.

Ayodhya temple F

ಈಗಾಗಲೇ ಉತ್ತರ ಹಾಗೂ ದಕ್ಷಿಣ ಭಾರತದ ಸಾವಿರಾರು ಜನರು ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ನೀಡಿದ್ದಾರೆ. ಅವುಗಳಿಗೆ ಮೇಲೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ. ಈ ಮೂಲಕ ನೆಲ ಮಹಡಿಯ ನಿರ್ಮಾಣಕ್ಕೆ ಬೇಕಾದ ಕಂಬಗಳು, ಇಟ್ಟಿಗೆ ಎಲ್ಲವೂ ಈಗಲೇ ಸಿದ್ಧವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *