ಚಿಕ್ಕಮಗಳೂರು: ತಮಟೆ ಬಾರಿಸಿದ್ದೇನು, ಡ್ಯಾನ್ಸ್ ಮಾಡಿದ್ದೇನು. ನೆಲದ ಮೇಲೆ ಮಲಗಿ ಪೋಸ್ ಕೊಟ್ಟಿದ್ದೇನು. ಅಬ್ಬಬ್ಬಾ ನಮ್ಮ ಸಮಾಜ ಕಲ್ಯಾಣ ಸಚಿವರ ಹಾಡಿ ವಾಸ್ತವ್ಯ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಇವರು ಬಂದಾಗ ನಮ್ಮ ಸಮಸ್ಯೆ ದೂರವಾಗುತ್ತೆ ಅಂತ ಜನ ಕನಸು ಕಂಡಿದ್ರು. ಆದ್ರೆ ಆಗಿದ್ದೇ ಬೇರೆ. ಊರು ಉದ್ದಾರ ಆಗ್ಲಿಲ್ಲ. ಸಚಿವ ಆಂಜನೇಯ ಬರುವಾಗ ಹಾಕಿದ್ದ ರಸ್ತೆ, ಲೈಟ್ ಉಳಿದಿದ್ದು ಎರಡೇ ದಿನ.
ಇಷ್ಟೇ ಆಗಿದ್ರೆ ಈ ರಾಜಕಾರಣಿಗಳ ಹಣೆಬರಹನೇ ಇಷ್ಟು ಅನ್ಕೊಂಡು ಸುಮ್ಮನಿರಬಹುದಿತ್ತು. ಆದ್ರೆ ಈ ಒಂದು ರಾತ್ರಿಯ ವಾಸ್ತವ್ಯಕ್ಕೆ ಖರ್ಚು ಮಾಡಿದ್ದು ಬರೋಬ್ಬರಿ ಮೂರು ಲಕ್ಷ.
Advertisement
Advertisement
ಹೌದು. ಬೋಗಸ್ ಬಿಲ್ ಮಾಡಿ ಸಚಿವರ ಹೆಸರಲ್ಲಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಭ್ರಷ್ಟರು. ಅವರ ಬಿಲ್‍ನಲ್ಲಿ ಯಾವುದಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಅಂತಾ ನೋಡೋದಾದ್ರೆ: ಕುಡಿಯೋ ನೀರಿಗೆ 4,800 ರೂಪಾಯಿ, ಪ್ಲಾಸ್ಟಿಕ್ ಗ್ಲಾಸ್‍ಗೆ 4,400 ರೂಪಾಯಿ, ಫ್ಲೆಕ್ಸ್‍ಗೆ 56,000 ರೂಪಾಯಿ, ಊಟ-ತಿಂಡಿಗೆ 1.20 ಲಕ್ಷ ರೂಪಾಯಿ, ಶಾಮಿಯಾನ ಹಾಗೂ ಲೈಟಿಂಗ್ಸ್‍ಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ.
Advertisement
Advertisement
ರಸ್ತೆ, ಅಂಗನವಾಡಿ, ಸಮುದಾಯ ಭವನ ಎಲ್ಲವೂ ಆಗ್ಬೇಕಿತ್ತು. ಆದ್ರೆ ಯಾವುದೂ ಮಾಡಿಕೊಟ್ಟಿಲ್ಲ. ಇಲ್ಲಿ ಬಂದು ಹೋಗಿ ಆಶ್ವಾಸನೆ ಕೊಟ್ಟಿದ್ದು ಯಾವುದೂ ಆಗಿಲ್ಲ. 3 ಸ್ಟ್ರೀಟ್ ಲೈಟ್, 2 ಹೋಮ್ ಲೈಟ್ ಹಾಕಿದ್ರು. ಎರಡು ತಿಂಗಳು ಉರಿಯಿತು. ಆಮೇಲೆ ಯಾವುದೂ ಉರೀತಿಲ್ಲ ಎಂದು ಸ್ಥಳೀಯರಾದ ಮಹೇಶ್ ಹೇಳಿದ್ದಾರೆ.
ಮನೆ ಮಾಡಿಕೊಡ್ತೀನಿ ಎಂದು ಹೇಳಿದ್ರು. 32 ಮನೆ ಕೊಡ್ತೀವಿ ಎಂದಿದ್ರು. ಯಾರಿಗೂ ಮನೆ ಕೊಟ್ಟಿಲ್ಲ. ನಿಮ್ಮಲ್ಲಿ ಯಾರಾದ್ರೂ ಅಂಗನವಾಡಿ ಟೀಚರ್ ಆಗ್ಬೇಕು ಎಂದಿದ್ರು. ಟೀಚರ್ ಬಿಡಿ, ಮಕ್ಕಳಿಗೆ ಅಂಗನವಾಡಿ ಮಾಡಿಕೊಟ್ಟಿದ್ರೆ ಎಷ್ಟೋ ಸಹಾಯವಾಗ್ತಿತ್ತು ಅಂತ ಮತ್ತೊಬ್ಬ ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.
ಒಟ್ನಲ್ಲಿ ಸಚಿವರು ಗ್ರಾಮವಾಸ್ತವ್ಯದ ವೇಳೆ ಕ್ಯಾಮೆರಾ ಮುಂದೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಬುರುಡೆ ಬಿಟ್ರೆ, ಅಧಿಕಾರಿಗಳು ಸಚಿವರ ಹೆಸರಲ್ಲಿ ಸರ್ಕಾರಕ್ಕೆ ಪಂಗನಾಮ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಹಾಡಿ ಜನ ತಲೆ ಚಚ್ಚಿಕೊಳ್ತಿದ್ದಾರೆ.