ಅದೊಂದು ಕಾಲವಿತ್ತು, ಆಗ ಭಾರತದ ಕೆಲ ಕ್ರೀಡಾಪಟುಗಳು ಬರಿಗಾಲಿನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ದಿನಗಳು ಅದು. ಆದ್ರೆ ಇಂದು ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಆತ್ಮವಿಶ್ವಾಸವೇ ಬೇರೆ. ಸದ್ಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದಿಂದ ಯಶಸ್ಸು ಕಾಣುತ್ತಿರುವ ಭಾರತ, ವಿಶ್ವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ (Olympics) ಕ್ರೀಡಾಕೂಟ ಆಯೋಜಿಸಲು ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಇತ್ತೀಚೆಗೆ ಪ್ರಸ್ತಾಪಿಸಿದ್ದಾರೆ.
Advertisement
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತ ಒಲಿಂಪಿಕ್ಸ್ ಆತಿಥ್ಯ ವಹಿಸಲು ಕಾತರದಿಂದ ಕಾಯುತ್ತಿದೆ. 2036ರ ಒಲಿಂಪಿಕ್ಸ್ (Olympics 2036) ಯಶಸ್ವಿಯಾಗಿ ಸಂಘಟಿಸಲು ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತದೆ. ಇದು 140 ಕೋಟಿ ಭಾರತೀಯರ ಕನಸು ಎಂದು ಹೇಳಿದ್ದರು. ಅಲ್ಲದೇ ಕೇಂದ್ರೀಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಅನುರಾಗ್ ಠಾಕೂರ್ (Anurag Thakur), ಭಾರತ ಖಂಡಿತವಾಗಿಯೂ ಈ ಅವಕಾಶ ಸದುಪಯೋಗಪಡಿಸಿಕೊಳ್ಳಲಿದೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕ್ರೀಡೆಗೆ ನೀಡಿದ ಅನುದಾನದಲ್ಲಿ 2.5 ಪಟ್ಟು ಹೆಚ್ಚಾಗಿದೆ. ಕ್ರೀಡೆಗೆ ಉತ್ತೇಜನ ನೀಡಬೇಕು ಅನ್ನೋದು ಇದರಿಂದ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಕಳೆದ 2 ವರ್ಷಗಳಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಿವುಡರ ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಈ ಎಲ್ಲಾ ಚಾಂಪಿಯನ್‌ಶಿಪ್‌ಗಳಲ್ಲೂ ಭಾರತ ಉತ್ತಮ ಸಾಧನೆಯನ್ನೇ ತೋರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲೂ 107 ಪದಕಗಳನ್ನ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ. ಅಷ್ಟೇ ಯಾಕೆ ಚೆಸ್ ಒಲಂಪಿಯಾಡ್, ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಆತಿಥ್ಯ ವಹಿಸಿರುವ ಭಾರತ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇವೆಲ್ಲವೂ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗುಜರಾತ್‌ನಲ್ಲಿ 2036ರ ಒಲಿಂಪಿಕ್ಸ್ ಜಾಗತಿಕ ಕ್ರೀಡಾ ಹಬ್ಬ ಜರುಗಲಿದೆ.
Advertisement
ಒಲಿಂಪಿಕ್ಸ್ ಆತಿಥ್ಯ ಪಡೆಯುವುದು ಹೇಗೆ?
ವಿಶ್ವದ ಸುಮಾರು ರಾಷ್ಟ್ರಗಳು ಪಾಲ್ಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಸುಲಭದ ಕೆಲಸವಲ್ಲ. 45 ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಡ್, 56 ದೇಶಗಳು ಅಂಗಳಕ್ಕಿಳಿಯುವ ಕಾಮನ್‌ವೆಲ್ತ್, 10 ರಾಷ್ಟ್ರಗಳು ಆಡುವ ವಿಶ್ವಕಪ್ ಟೂರ್ನಿಗಿಂತ ಒಲಿಂಪಿಕ್ಸ್ ಕೂಟಕ್ಕೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದಕ್ಕೆ ತಕ್ಕಂತೆ ಲಕ್ಷಕೋಟಿಗಟ್ಟಲೆ ವೆಚ್ಚವನ್ನೂ ಮಾಡಬೇಕಾಗುತ್ತದೆ. ಈ ಜಾಗತಿಕ ಕ್ರೀಡಾ ಹಬ್ಬವು ವಾಸ್ತವವಾಗಿ ಶತಕೋಟಿ ಡಾಲರ್‌ಗಳ ವಿಷಯ. ಸ್ಥಳ, ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಅಚ್ಚುಕಟ್ಟಾಗಿದ್ದರಷ್ಟೇ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯ. ಇದಕ್ಕಾಗಿ ಆತಿಥೇಯ ದೇಶವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಯೋಜನೆಯ ಪೈಪೋಟಿ ವೇಳೆ ಅತಿಹೆಚ್ಚು ಬಿಡ್ ಮಾಡುವ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯದ ಅವಕಾಶ ಲಭಿಸುತ್ತದೆ.
ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ಏಕೆ ಮುಖ್ಯ?
ಒಲಿಂಪಿಕ್ಸ್ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್ ಬಹುದೊಡ್ಡ ಬೂಸ್ಟರ್ ಡೋಸ್ ಆಗಿದ್ದು, ಉದ್ಯೋಗಾವಕಾಶಗಳೂ ಸೃಸ್ಟಿಯಾಗುತ್ತವೆ.
ಮೋದಿ ತವರಲ್ಲಿ ತಯಾರಿ ಶುರು:
ಅಮಿತ್ ಶಾ ಅವರು ಈಗಾಗಲೇ ಒಲಿಂಪಿಕ್ಸ್ ಸಿದ್ಧತೆಗಾಗಿ ಮಹತ್ವದ ಸಭೆಗಳನ್ನ ನಡೆಸಿದ್ದು, ಗುಜರಾತ್‌ನಲ್ಲಿ ತಯಾರಿ ಶುರುವಾಗಿದೆ. ಗುಜರಾತ್ ಸರ್ಕಾರ ಎಕರೆ ಭೂಮಿ ಗುರುತಿಸಿ, ಕಾಮಗಾರಿ ಆರಂಭಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಬಳಿ ಸಂಭಾವ್ಯ ಒಲಿಂಪಿಕ್ ಗ್ರಾಮ ನಿರ್ಮಾಣವಾಗುತ್ತಿದೆ. ಅಹಮದಾಬಾದ್‌ನ ಸರ್ದಾರ್ ಸ್ಪೋರ್ಟ್ಸ್ ಎನ್‌ಕ್ಲೇವ್ ಒಲಿಂಪಿಕ್ಸ್ ಕೂಟದ ಪ್ರಮುಖ ಕೇಂದ್ರವಾಗಲಿದ್ದು, ಇಲ್ಲಿ 20ಕ್ಕೂ ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆಗಳು ನಡೆಯಲಿವೆ ಎನ್ನಲಾಗುತ್ತಿದೆ. ರಾಜ್ಯದಾದ್ಯಂತ 33 ಕ್ರೀಡಾ ಸ್ಥಳಗಳನ್ನ ಪಟ್ಟಿ ಮಾಡಲಾಗಿದ್ದು, ಶಿವರಾಜಪುರ, ಸೂರತ್‌ನ ಕರಾವಳಿಗಳಲ್ಲಿ ಜಲ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ. ಸೂರತ್ ನಗರದಲ್ಲಿ ಜಲಕ್ರೀಡೆಗಳಿಗೆ ಅನುಕೂಲಕರ ವಾತಾವರಣ ಇರುವುದರಿಂದ ಗುಜರಾತ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಒಲಿಂಪಿಕ್ಸ್ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು?
2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್ ಆಯೋಜಿಸಲು 2 ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ.
ಒಲಿಂಪಿಕ್ಸ್ ಆಯೋಜನೆ ಎಲ್ಲಿ – ವಿನಿಯೋಗಿಸಿದ ವೆಚ್ಚ ಎಷ್ಟು (ಶೇಕಡಾವಾರು)?
ಟೋಕಿಯೊ (ಜಪಾನ್) 2020- (500%)
ರಿಯೋ ಡಿ ಜನೈರೋ (ಬ್ರೆಜಿಲ್)- 2016 – (51%)
ಲಂಡನ್ (ಇಂಗ್ಲೆಂಡ್)- 2012-(76%)
ಬೀಜಿಂಗ್ (ಚೀನಾ)- 2008-(2%)
ಅಥೆನ್ಸ್ (ಗ್ರೀಸ್) – 2004-(49%)
ಸಿಡ್ನಿ (ಆಸ್ಟ್ರೇಲಿಯಾ)- 2000-(90%)
ಅಟ್ಲಾಂಟಾ (ಅಮೆರಿಕ) – 1996-(151%)
ಬಾರ್ಸಿಲೋನಾ (ಸ್ಪೇನ್) – 1993 -(266%)
ಭಾರತದ ಮುಂದಿರುವ ಸವಾಲುಗಳೇನು?
ಮುಂದಿನ ಜಾಗತಿಕ ಕೂಟಗಳಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದು ತಾನು ಕ್ರೀಡಾ ಪವರ್ ಹೌಸ್ ಎಂದು ಸಾಬೀತು ಪಡಿಸುವುದು. ಸುಮಾರು ಒಂದೂವರೆ ಶತಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಹೆಚ್ಚಿನ ಸಂಖ್ಯೆಯ ಒಲಿಂಪಿಕ್ ಪದಕ ವಿಜೇತರನ್ನು ಹೊಂದುವುದು ಪ್ರತಿಷ್ಠೆಯ ವಿಚಾರವಾಗಬೇಕಿದೆ. ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಭಾರತ ಸಾಬೀತು ಮಾಡಬೇಕು. ಇಂಡೋನೇಷ್ಯಾ, ಕತಾರ್, ಕೊರಿಯಾ, ಜರ್ಮನಿಯಂಥ ಪ್ರಬಲ ಸ್ಪರ್ಧಿಗಳ ನಡುವೆ ಬಿಡ್ ಮಾಡಬೇಕು. ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸ್ವಚ್ಛ ಮತ್ತು ಸುರಕ್ಷಿತ ಸೌಲಭ್ಯಗಳನ್ನು ಒದಗಿಸಬೇಕು. ವಿವಿಧ ಅಕಾಡೆಮಿಗಳು, ಕ್ರೀಡಾ ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು.
Web Stories