ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ಕಿವೀಸ್ ತಂಡಗಳು ಸೆಣಸಲಿವೆ. ಟೂರ್ನಿಯ ಹೈವೋಲ್ಟೇಜ್ ಪಂದ್ಯವಾಗಿರುವ ಇಂಡೋ ಪಾಕ್ ಕದನ ಫೆ.23 ರಂದು ನಡೆಯಲಿದ್ದು, ಈ ಬಾರಿ ಚಾಂಪಿಯನ್ಸ್ ಕಿರೀಟ ಯಾರ ಮುಡಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನೂ ವರೆಗಿನ ಟ್ರೋಫಿ ವಿನ್ನರ್‌ಗಳ ಪಟ್ಟಿ ನೋಡೋದಾದ್ರೆ…
ಯಾವ ವರ್ಷ – ಯಾರು ಚಾಂಪಿಯನ್?
1998
ಆಯೋಜಕ ದೇಶ: ಬಾಂಗ್ಲಾದೇಶ
ವಿನ್ನರ್: ದಕ್ಷಿಣ ಆಫ್ರಿಕಾ
ರನ್ನರ್ ಅಪ್: ವೆಸ್ಟ್ ಇಂಡೀಸ್
2000
ಆಯೋಜಕ ದೇಶ : ನೈರೋಬಿ (ಕೀನ್ಯಾ)
ವಿನ್ನರ್ : ನ್ಯೂಜಿಲ್ಯಾಂಡ್
ರನ್ನರ್ ಅಪ್ : ಭಾರತ
2002
ಆಯೋಜಕ ದೇಶ : ಶ್ರೀಲಂಕಾ
ಜಂಟಿ ವಿನ್ನರ್ : ಭಾರತ ಮತ್ತು ಶ್ರೀಲಂಕಾ
2004
ಆಯೋಜಕ ದೇಶ : ಇಂಗ್ಲೆಂಡ್
ವಿನ್ನರ್ : ವೆಸ್ಟ್ ಇಂಡೀಸ್
ರನ್ನರ್ ಅಪ್ : ಇಂಗ್ಲೆಂಡ್
2006
ಆಯೋಜಕ ದೇಶ : ಭಾರತ
ವಿನ್ನರ್ : ಆಸ್ಟ್ರೇಲಿಯಾ
ರನ್ನರ್ ಅಪ್ : ವೆಸ್ಟ್ ಇಂಡೀಸ್
2009
ಆಯೋಜಕ ದೇಶ : ದಕ್ಷಿಣ ಆಫ್ರಿಕಾ
ವಿನ್ನರ್ : ಆಸ್ಟ್ರೇಲಿಯಾ
ರನ್ನರ್ ಅಪ್ : ನ್ಯೂಜಿಲ್ಯಾಂಡ್
2013
ಆಯೋಜಕ ದೇಶ : ಇಂಗ್ಲೆಂಡ್
ವಿನ್ನರ್ : ಭಾರತ
ರನ್ನರ್ ಅಪ್ : ಇಂಗ್ಲೆಂಡ್
2017
ಆಯೋಜಕ ದೇಶ : ಇಂಗ್ಲೆಂಡ್
ವಿನ್ನರ್ : ಪಾಕಿಸ್ತಾನ
ರನ್ನರ್ ಅಪ್ : ಭಾರತ
ಮೊದಲ ಆವೃತ್ತಿ ಗೆದ್ದಿದ್ದು ಚೋಕರ್ಸ್ ದ.ಆಫ್ರಿಕಾ
ದಕ್ಷಿಣ ಆಫ್ರಿಕಾ ಚೋಕರ್ಸ್ ಎಂದೇ ಹೆಸರುವಾಸಿ. ಅದೃಷ್ಟ ಕೈಕೊಟ್ಟು ಹಲವು ಮಹತ್ವದ ಪಂದ್ಯಗಳಲ್ಲಿ ಸೋತು, ಟ್ರೋಫಿ ತಪ್ಪಿಸಿಕೊಂಡ ಇತಿಹಾಸ ತಂಡಕ್ಕಿದೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಕಪ್ ಗೆದ್ದಿದ್ದೇ ದಕ್ಷಿಣ ಆಫ್ರಿಕಾ ಎಂಬುದು ಗಮನಾರ್ಹ. 1998ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ನ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಆಫ್ರಿಕಾ ಆ ಟೂರ್ನಿಯಲ್ಲಿ ಕೇವಲ 3 ಪಂದ್ಯಗಳನ್ನಾಡಿತ್ತು.
2 ದಿನ ನಡೆದಿದ್ದ ಫೈನಲ್ ಪಂದ್ಯ:
2002ರ ಫೈನಲ್ 2 ದಿನದಲ್ಲಿ 2 ಬಾರಿ ನಡೆದಿತ್ತು. ಆದರೆ 2 ಬಾರಿಯೂ ಫಲಿತಾಂಶ ಸಿಗಲಿಲ್ಲ. ಕೊಲಂಬೊದಲ್ಲಿ ಸೆ.29ಕ್ಕೆ ಫೈನಲ್ ನಿಗದಿ ಯಾಗಿತ್ತು. ಲಂಕಾ ಬ್ಯಾಟ್ ಮಾಡಿ 244 ರನ್ ಗಳಿಸಿತ್ತು. ಚೇಸಿಂಗ್ ವೇಳೆ ಭಾರತ 2 ಓವರ್‌ಗೆ 14 ರನ್ ಗಳಿಸಿದ್ದಾಗ ಮಳೆ ಸುರಿಯಲಾರಂಭಿಸಿತು. ಆ ದಿನ ಪಂದ್ಯ ನಡೆಸಲಾಗಲಿಲ್ಲ. ಮರುದಿನ ಪಂದ್ಯ ಹೊಸದಾಗಿ ಆರಂಭಿಸಲಾಯಿತು. ಲಂಕಾ 222 ರನ್ ಗಳಿಸಿದರೆ, ಭಾರತ 8.4 ಓವರಲ್ಲಿ 1 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. ವೀರೇಂದ್ರ ಸೆವ್ಹಾಗ್ ಉತ್ತಮ ಫಾರ್ಮ್‌ನಲ್ಲಿದ್ದರು. ಇದರಿಂದ ಭಾರತ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ನಡೆಯಲಿಲ್ಲ. ಭಾರತ-ಶ್ರೀಲಂಕಾ ಜಂಟಿ ಚಾಂಪಿಯನ್ ಎಂದು ಘೋಷಿಸಲಾಯಿತು.