ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೂವರೆಗೂ 27 ಬಾರಿ ವಿದೇಶಿ ಪ್ರಯಾಣ ಕೈಗೊಂಡಿದ್ದು, ಬರೋಬ್ಬರಿ 44 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವಿದೇಶ ಪ್ರಯಾಣಕ್ಕಾಗಿ ಅಂದಾಜು 275 ಕೋಟಿ ರೂ. ಖರ್ಚಾಗಿದೆ ಎಂದು pmindia.gov.in. ವೆಬ್‍ಸೈಟ್ ತಿಳಿಸಿದೆ.
Advertisement
ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್ 15, 2014ರಲ್ಲಿ ಮೊದಲ ಬಾರಿಗೆ ನೆರೆಯ ಭೂತಾನ್ ರಾಷ್ಟ್ರಕ್ಕೆ ತೆರಳಿದ್ದರು. ದಾಖಲೆಗಳ ಪ್ರಕಾರ ಮೋದಿಯವರ ಒಟ್ಟು ಪ್ರವಾಸಕ್ಕೆ 274,88,64,465 ರೂ. ಖರ್ಚಾಗಿದೆ.
Advertisement
Advertisement
ಏಪ್ರಿಲ್ 2015ರಲ್ಲಿ ಕೈಗೊಂಡಿದ್ದ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳ ಪ್ರವಾಸಕ್ಕೆ ಅತಿ ಹೆಚ್ಚು ಹಣ ಖರ್ಚಾಗಿದ್ದು, ಒಟ್ಟು 31,25,78,000 ರೂಪಾಯಿ ವ್ಯಯವಾಗಿರುವ ಮಾಹಿತಿ ವೆಬ್‍ಸೈಟ್‍ನಲ್ಲಿದೆ. ಭೂತಾನ್ ದೇಶದ ಪ್ರವಾಸಕ್ಕೆ ಕಡಿಮೆ ಹಣ ವ್ಯಯವಾಗಿದ್ದು ಒಟ್ಟು 2,45,27,465 ರೂ. ಖರ್ಚಾಗಿದೆ.
Advertisement
ಈ ಅಧಿಕಾರದ ಅವಧಿಯಲ್ಲಿ ಮೋದಿ ಅವರು ಅಮೇರಿಕ, ಜಪಾನ್, ನೇಪಾಳ, ಚೀನಾ ಈ ದೇಶಗಳಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ವೆಬ್‍ಸೈಟ್ ನಲ್ಲಿ ದಾಖಲಾಗಿರುವಂತೆ ಕೊನೆಯ ಬಾರಿ ನೋಟ್ ಬ್ಯಾನ್ ನಂತರ ನವೆಂಬರ್ 2016ರಂದು ಜಪಾನ್ ದೇಶಕ್ಕೆ ಮೋದಿ ಪ್ರವಾಸ ಹೋಗಿದ್ದು, ಇದರ ವೆಚ್ಚದ ಮಾಹಿತಿ ವೆಬ್‍ಸೈಟ್‍ನಲ್ಲಿ ಅಪ್‍ಡೇಟ್ ಆಗಿಲ್ಲ.
ಮೋದಿಯವರು ಮೇ ಮತ್ತು ಜುಲೈ ತಿಂಗಳಲ್ಲಿ ಶ್ರೀಲಂಕಾ, ಇಸ್ರೇಲ್, ರಷ್ಯಾ, ಜರ್ಮನಿ, ಸ್ಪೇನ್ ಮತ್ತು ಕಜಕಿಸ್ತಾನ ದೇಶಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.
ಮನಮೋಹನ್ ಸಿಂಗ್ ಪ್ರವಾಸಕ್ಕೆ ಎಷ್ಟು ಖರ್ಚಾಗಿತ್ತು?
ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಮ್ಮ 9 ವರ್ಷಗಳ ಅವಧಿಯಲ್ಲಿ ಒಟ್ಟು 67 ಬಾರಿ ವಿದೇಶ ಪ್ರಯಾಣ ಕೈಗೊಂಡಿದ್ದರು. 9 ವರ್ಷಗಳಲ್ಲಿ ಮನಮೋಹನ್ ಸಿಂಗ್ ವಿದೇಶ ಪ್ರವಾಸಕ್ಕೆ 642.45 ಕೋಟಿ ರೂ. ವೆಚ್ಚವಾಗಿದೆ ಎಂದು 2013ರಲ್ಲಿ ಆರ್‍ಟಿಐ ಅಡಿ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯಲ್ಲಿ 62 ವಿದೇಶಿ ಪ್ರಯಾಣದ ವೆಚ್ಚಗಳ ವಿವರ ಮಾತ್ರ ಸಿಕ್ಕಿದ್ದು, ಉಳಿದ 5 ವಿದೇಶಿ ಪ್ರಯಾಣದ ಖರ್ಚು ವೆಚ್ಚಗಳು ಸಿಕ್ಕಿರಲಿಲ್ಲ.
2012ರ ಜಿ 20 ಅಧಿವೇಶನಕ್ಕೆ ಕೈಗೊಂಡ 7 ದಿನಗಳ ಪ್ರವಾಸಕ್ಕೆ 26.94 ಕೋಟಿ ರೂ. ವೆಚ್ಚವಾಗಿದ್ದು, ಇದು ಮನಮೋಹನ್ ಸಿಂಗ್ ಪ್ರವಾಸದಲ್ಲಿನ ಅತಿ ಹೆಚ್ಚು ಹಣ ಖರ್ಚಾಗಿರುವ ಪ್ರವಾಸ ಎನ್ನುವುದು ಆರ್‍ಟಿಐ ಅಡಿ ಬಹಿರಂಗವಾಗಿತ್ತು.