ಬೆಂಗಳೂರು: ಕಾವೇರಿ ನದು ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದೆ.
ತೀರ್ಪಿನಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ. ಈ ಮೂಲಕ ಕರ್ನಾಟಕಕ್ಕೆ ಗೆಲುವು ಸಿಕ್ಕಂತಾಗಿದೆ. ಕಾವೇರಿ ತೀರ್ಪಿನ ಪ್ರತಿ ಲಭ್ಯವಾಗಿದ್ದು, ಅದರ ಹೈಲೈಟ್ಸ್ ಹೀಗಿದೆ.
Advertisement
1. ಎರಡೂ ಒಪ್ಪಂದಗಳು ರಾಜಕೀಯ ಒಪ್ಪಂದಗಳಲ್ಲ. ಸಾರ್ವಜನಿಕರ ಹಿತಾದೃಷ್ಟಿಯಿಂದ ಮಾಡಿಕೊಳ್ಳಲಾದ ಒಪ್ಪಂದ. ಹೀಗಾಗಿ ಎರಡೂ ಒಪ್ಪಂದಗಳು ಸಿಂಧುವಾಗಿವೆ.
Advertisement
2. ಒಪ್ಪಂದ ಅಸಮರ್ಪಕವೆಂಬ ಕರ್ನಾಟಕದ ವಾದವನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Advertisement
3. 1892 ಹಾಗೂ 1924ರ ಒಪ್ಪಂದವನ್ನ ಮಾಡಿಕೊಳ್ಳುವ ಸಂದರ್ಭದಲ್ಲಿ ಕರ್ನಾಟಕಕ್ಕೆ ಮಾತುಕತೆ ನಡೆಸುವ ಅಧಿಕಾರವಿರಲಿಲ್ಲ ಎಂಬ ಕರ್ನಾಟಕದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Advertisement
4. ಒಪ್ಪಂದಗಳು ಶಾಶ್ವತವಲ್ಲ ಹಾಗೂ 1974ರಲ್ಲಿ ಅವುಗಳ ಅವಧಿ ಮುಗಿದಿದೆ.
5. ಸುಪ್ರೀಂ ಕೋರ್ಟ್ ಕಾವೇರಿ ಪ್ರಕರಣದಲ್ಲಿ ಈ ಹಿಂದಿನ ನಿರ್ಧಾರಗಳನ್ನ ಅನುಸರಿಸಿದ್ದು, ನೀರು ರಾಷ್ಟ್ರದ ಆಸ್ತಿ ಎಂಬುದನ್ನ ಎತ್ತಿ ಹಿಡಿದಿದೆ. ಯಾವುದೇ ಒಂದು ರಾಜ್ಯಕ್ಕೆ ಅದರ ಮೇಲೆ ವಿಶೇಷ ಹಕ್ಕು ಇರುವುದಿಲ್ಲ.
6. ಗೃಹಬಳಕೆಗೆ ನೀರಿನ ಕಡಿಮೆ ನೀರಿನ ಹಂಚಿಕೆ ಬಗ್ಗೆ ತಮಿಳುನಾಡಿನ ವಾದವನ್ನ ಕೂಡ ತಿರಸ್ಕರಿಸಲಾಗಿದೆ.
7. ಕುಡಿಯುವ ನೀರಿಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ. ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಕುಡಿಯುವ ನೀರಿಗೆ ಹೆಚ್ಚುವರಿ ನೀರು ರಾಜ್ಯಕ್ಕೆ ಅಗತ್ಯವಿದೆ ಎಂದು ವಾದಿಸಿತ್ತು. ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಅಗತ್ಯವಿದೆ ಎನ್ನುವ ರಾಜ್ಯದ ವಾದಕ್ಕೆ ತಮಿಳುನಾಡು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
8. ಕೇರಳದ ನದಿಪಾತ್ರ ತಿರುವನ್ನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆಯನ್ನು ಕೂಡ ಎತ್ತಿಹಿಡಿದಿದೆ.
9. ಕೇಂದ್ರಾಡಳಿತ ಪ್ರದೇಶ ಪುದುಚೆರಿ ಎರಡನೇ ಬೆಳೆಗೆ ಅರ್ಹವಾಗಿದ್ದು, 43 ಸಾವಿರ ಎಕರೆಗೆ ಅರ್ಹವಾಗಿದೆ.
10. ತಮಿಳುನಾಡಿನಲ್ಲಿ ಅತೀಯಾದ ಅಂತರ್ಜಲ ಹೊರತೆಗೆಯುವಿಕೆ ಬಗ್ಗೆ ಅಪಾಯವಿದೆ. ಹೀಗಾಗಿ ಕೊನೆಯ ಹಂಚಿಕೆಯಲ್ಲಿ ನ್ಯಾಯಾಧಿಕರಣದ ಅಧ್ಯಯನದ ಪತ್ತೆ ಮಾಡಿರುವ 20 ಟಿಎಂಸಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತಮಿಳುನಾಡಿನಲ್ಲಿ 10 ಟಿಎಂಸಿ ಅಂತರ್ಜಲವನ್ನ ಪರಿಗಣಿಸಿದೆ.
11. ಪರಿಸರದ ಹಂಚಿಕೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧಿಕರಣದ ಅಧ್ಯಯನವನ್ನು ಎತ್ತಿಹಿಡಿದಿದೆ.
12 ಕರ್ನಾಟಕ ಹೆಚ್ಚುವರಿ 14.75 ಟಿಎಂಸಿ ನೀರಿಗೆ ಅರ್ಹವಾಗಿದೆ. ಕಾವೇರಿ ನದಿಪಾತ್ರದ ಹೊರಗಿರುವ ಬೆಂಗಳೂರು ನಗರಕ್ಕೆ ನೀರು ಪೂರೈಕೆಯನ್ನ ಪರಿಗಣಿಸಲಾಗಿದೆ.
13. ಕರ್ನಾಟಕದ ನೀರು ಹಂಚಿಕೆಯ ಹೊರೆಯನ್ನ 192 ಟಿಎಂಸಿ ಯಿಂದ 177.25 ಟಿಎಂಸಿಗೆ ಇಳಿಸಲಾಗಿದೆ.
14. ನಿರ್ವಹಣಾ ಮಂಡಳಿಯ ಸ್ಥಾಪನೆ ಕುರಿತಂತೆ ಅದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚುವರಿ ನೀರು, 15 ವರ್ಷಕ್ಕೆ ನ್ಯಾಯಾಧಿಕರಣ ತೀರ್ಪು ಅನ್ವಯ: ಸುಪ್ರೀಂ ಕೋರ್ಟ್
1892ರಲ್ಲಿ ಮೊದಲ ಒಪ್ಪಂದ:
ಕಾವೇರಿಯ ಮೊದಲ ಒಪ್ಪಂದ ಆದರೆ ಇದು ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿದ್ದು 17-18 ನೇ ಶತಮಾನದಲ್ಲಿ. 1876-78 ರಲ್ಲಿ ಉಂಟಾದ ಭೀಕರ ಕ್ಷಾಮ ತಲೆದೋರಿದಾಗ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಮುಂದಾದಾಗಿದ್ದರು. ಈ ಯೋಜನೆಗೆ 1890ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ನಮ್ಮ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದರು. ಇದರ ಫಲವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು. ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.
ಎಲ್ಲಿಯ ವೇದಾವತಿ, ಅದೆಲ್ಲಿಯ ಕಾವೇರಿ..?
ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ಪ್ರದೇಶವಿದೆ. ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಗಾಗಿತ್ತು. ಇಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಅಗತ್ಯ ಈ ಕಾರಣ ಮುಂದಿಟ್ಟು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.
ಬ್ರಿಟಿಷರ ಕಾಲದಲ್ಲಿ ಕೆಆರೆಸ್ ನಿರ್ಮಾಣವಾಗಿದ್ದು ಹೇಗೆ?
ಬ್ರಿಟಿಷರ ಅಳ್ವಿಕೆ ಅವಧಿಯಲ್ಲಿ ನೀರನ್ನು ಸಂಗ್ರಹಿಸುವ ದೃಷ್ಟಿಯನ್ನು ಇಟ್ಟುಕೊಂಡು ಎರಡೂ ಪ್ರಭುತ್ವಗಳು 1910ರಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾದವು. ಮೈಸೂರಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಅವಧಿಯಲ್ಲಿ 1911ರಲ್ಲಿ ಕೃಷ್ಣ ರಾಜ ಸಾಗರ ಅಣೆಕಟ್ಟು ನಿರ್ಮಾಣದ ಯೋಜನೆ ಆರಂಭಗೊಂಡು 1938ರಲ್ಲಿ ಮುಕ್ತಯವಾಯಿತು.
1924ರಲ್ಲಿ ಎರಡನೇ ಒಪ್ಪಂದ ಯಾಕೆ ನಡೆಯಿತು?
1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಮೈಸೂರು ಸಂಸ್ಥಾನ ಕೆಲಸ ಮುಂದುವರೆಸಿತು. ಆದರೂ 1892ರ ಒಪ್ಪಂದದಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿತು. ಬ್ರಿಟಿಷರು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ಪ್ರಾಂತ್ಯ ಲಂಡನ್‍ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್‍ಗೆ ಮೇಲ್ಮನವಿ ಸಲ್ಲಿಸಿತು. ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲವಾದರೂ 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು.
1924ರ ಒಪ್ಪಂದದಲ್ಲಿ ಏನಿತ್ತು?
ಈ ಒಪ್ಪಂದ ಪ್ರಕಾರ ಕಾವೇರಿ ಜಲನಯದ ಪ್ರದೇಶದಲ್ಲಿ ಒಟ್ಟು 868 ಟಿಎಂಸಿ ನೀರು ಲಭ್ಯವಿದೆ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದಂತೆ ಶೇ.75ರಷ್ಟು ಭಾಗ(651 ಟಿಎಂಸಿ) ತಮಿಳುನಾಡು ಮತ್ತು ಪುದುಚೇರಿಗೆ, ಕರ್ನಾಟಕಕ್ಕೆ ಶೇ.23(200 ಟಿಎಂಸಿ) ಕೇರಳಕ್ಕೆ ಶೇ.2(17.36) ಟಿಎಂಸಿ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಕೆಆರ್‍ಎಸ್ ನಿರ್ಮಾಣಕ್ಕೆ ಮದ್ರಾಸ್ ಪ್ರಾಂತ್ಯ ವಿರೋಧ ವ್ಯಕ್ತಪಡಿಸಿದ ಕಾರಣ ಮೆಟ್ಟೂರಿನಲ್ಲಿ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿತು. ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ಈ ವೇಳೆ ನಿರ್ಬಂಧಗಳನ್ನು ವಿಧಿಸಿತ್ತು. ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು ಎನ್ನುವ ಷರತ್ತನ್ನು ವಿಧಿಸಲಾಗಿತ್ತು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರಿನಲ್ಲಿ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು.
ಒಪ್ಪಂದ ಬ್ರೇಕ್ ಮಾಡಿದ ತಮಿಳುನಾಡು
1924ರ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ತಮಿಳುನಾಡು ತನ್ನ ಕರಾರನ್ನು ಮೀರಿ 18 ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಅಷ್ಟೇ ಅಲ್ಲದೇ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು. ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು. ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ರಾಜ್ಯ ನ್ಯಾಯಾಲಯಕ್ಕೆ ಹೋಯಿತು. ಆದರೆ 3 ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಖಟ್ಲೆಯನ್ನು ಹಿಂಪಡೆಯಲಾಯಿತು.
ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10,ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು. ಈಗ ಸುಪ್ರೀಂ ಕೋರ್ಟ್ ಕರ್ನಾಟಕ ತಮಿಳುನಾಡಿಗೆ ಪ್ರತಿವರ್ಷ 177.25 ಟಿಎಂಸಿ ನೀರನ್ನು ಹರಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.