ಮಂಡ್ಯ: ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂ ಒಳ ಹರಿವು ಹೆಚ್ಚುತ್ತಿದ್ದು, ಸಕ್ಕರೆ ನಾಡಿಗೂ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣರಾಜಪೇಟೆ ತಾಲೂಕಿನ ಹೇಮಗಿರಿಯ ಬಂಡಿಹೊಳೆ ಬಳಿ ತ್ರಿಶೂಲ್ ಜಲ ವಿದ್ಯುತ್ ಘಟಕದೊಳಕ್ಕೆ ಹೇಮಾವತಿ ನೀರು ನುಗ್ಗಿದೆ.
ಬಂಡಿಹೊಳೆಯ ತ್ರಿಶೂಲ್ ಜಲವಿದ್ಯುತ್ ಘಟಕದೊಳಕ್ಕೆ ನೀರು ನುಗ್ಗಿ ಎರಡು ಟರ್ಬೈನ್‍ಗಳು ಮುಳುಗಡೆಯಾಗಿದೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹೇಮಗಿರಿ ಬಳಿ ತೆಪ್ಪೋತ್ಸವ ನಡೆಯುವ ಬೆಟ್ಟದಲ್ಲಿ ಪಾದದವರೆಗೂ ಪ್ರವಾಹದ ನೀರು ಬಂದಿದ್ದು, ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ತೆಂಗು, ಬಾಳೆ, ಅಡಿಕೆ, ಕಬ್ಬು ಮುಳುಗಡೆಯಾಗಿದೆ.
Advertisement
Advertisement
ಇಂದು ಮಧ್ಯಾಹ್ನದ ನಂತರ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ನದಿಯ ನೀರಿಗೆ ಇಳಿಯದಂತೆ ತಾಲೂಕು ಆಡಳಿತದ ವತಿಯಿಂದ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ನದಿ ದಡದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.
Advertisement
ಇತ್ತ ಕಳೆದ 24 ಗಂಟೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 10 ಟಿಎಂಸಿ ನೀರು ಸಂಗ್ರಹವಾಗಿದ್ದು, ಶುಕ್ರವಾರ ಬೆಳಗ್ಗೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 20.915 ಟಿಎಂಸಿ ನೀರು ಸಂಗ್ರಹವಾಗಿತ್ತು. ಇಂದು ಬೆಳಗ್ಗೆ ವೇಳೆಗೆ ಕೆಆರ್‌ಎಸ್‌ನಲ್ಲಿ 30.261 ಟಿಎಂಸಿ ನೀರು ಸಂಗ್ರಹವಾಗಿದೆ.
Advertisement
ಗೊರೂರು ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಆರ್ ಪೇಟೆ ತಾಲೂಕಿನ ಬಂಡಿ ಹೊಳೆ ಸಮೀಪದ ಹೇಮಗಿರಿ ಫಾಲ್ಸ್ ನಲ್ಲಿ ಹೇಮಾವತಿ ನದಿಯು ಉಕ್ಕಿ ಹರಿಯುತ್ತಿದೆ. ಹಾಸನ ಜಿಲ್ಲೆಯ ಗೊರೂರು ಬಳಿಯ ಹೇಮಾವತಿ ಡ್ಯಾಂನಲ್ಲಿ ನೀರಿನ ಮಟ್ಟ ಅಧಿಕವಾಗಿರುವುದರಿಂದ ಹೇಮಾವತಿ ನದಿಪಾತ್ರದ ಜನರಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಕೆ.ಆರ್.ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿ ವ್ಯಾಪ್ತಿಯ ನೂರಾರು ಎಕರೆ ತೋಟಕ್ಕೆ ನೀರು ನುಗ್ಗಿದೆ. ನೂರಾರು ಎಕರೆ ತೆಂಗು, ಅಡಕೆ ತೋಟ ಜಲಾವೃತವಾಗಿದ್ದು, ಈಗಾಗಲೇ 8-10 ಮನೆಗಳು ಜಖಂ ಆಗಿವೆ. ಅಷ್ಟೇ ಅಲ್ಲದೇ ಅಂಕನಾಥೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ.