ರಾಂಚಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಅವರು ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ್ದಾರೆ. ಹೊಸ ಸರ್ಕಾರಕ್ಕೆ ಬಹುಮತವಿದೆ ಎಂದು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.
ಜಾರ್ಖಂಡ್ (Jharkhand) ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್ ಮೊದಲು ವಿಶ್ವಾಸಮತ ಯಾಚನೆ ಮಂಡಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಚುನಾಯಿತ ರಾಜ್ಯ ಸರ್ಕಾರವನ್ನು “ಅಸ್ಥಿರಗೊಳಿಸಲು” ಪ್ರಯತ್ನಿಸಿದೆ ಎಂದು ಹೇಳಿದರು. ಈ ಮೂಲಕ ಅವರು ಬಂಧಿತ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಕ್ಲೀನ್ ಚಿಟ್ ನೀಡಿದರು. ಇದನ್ನೂ ಓದಿ: 5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್
ಹೇಮಂತ್ ಸೂರೇನ್ ಅವರು ಮಾಡದ ಅಪರಾಧಕ್ಕಾಗಿ ಅವರನ್ನು ಎಳೆಯಲಾಗುತ್ತಿದೆ. ಹೇಮಂತ್ ಸೊರೇನ್ (Hemant Soren) ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಚಂಪೈ ಸೊರೇನ್ ಅವರು ವಿಶ್ವಾಸಮತ ಯಾಚನೆ ವೇಳೆ ಆರೋಪಿಸಿದರು.
ಆಪಾದಿತ ಭೂ ಹಗರಣದಲ್ಲಿ ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಹೇಮಂತ್ ಸೊರೇನ್ ಅವರು ಸೋಮವಾರದ ವಿಶ್ವಾಸ ಮತಕ್ಕೆ ಹಾಜರಾಗಿದ್ದರು. ಪಿಎಂಎಲ್‌ಎ ನ್ಯಾಯಾಲಯವು ಅದರಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರ ಮತ ಚಲಾಯಿಸಲು ವಿಧಾನಸಭೆಗೆ ಆಗಮಿಸಿದ್ದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರು. ಭೂ ಹಗರಣದಲ್ಲಿ ತನಗೆ ಇರುವ ಸಂಬಂಧವನ್ನು ಜಾರಿ ನಿರ್ದೇಶನಾಲಯ ಸಾಬೀತುಪಡಿಸಲಿ ಆರೋಪ ಸಾಬೀತಾದರೆ, “ನಾನು ರಾಜಕೀಯವನ್ನು ತೊರೆಯುತ್ತೇನೆ” ಎಂದು ಸವಾಲು ಹಾಕಿದರು. ಇದನ್ನೂ ಓದಿ: ಜಾರ್ಖಂಡ್ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ ಸ್ವೀಕಾರ