Latest
ಹೇಮಾ ಮಾಲಿನಿ ದಿನಾ ಕುಡೀತಾರೆ, ಅವ್ರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?: ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ನವದೆಹಲಿ: ಹೇಮಾ ಮಾಲಿನಿ ಪ್ರತಿದಿನ ಕುಡೀತಾರೆ. ಅವ್ರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂದು ಬಿಜೆಪಿ ಸಂಸದೆ ಹೇಮಮಾಲಿನಿ ವಿರುದ್ಧ ಮಹಾರಾಷ್ಟ್ರದ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಶಾಸಕ ಬಚ್ಚು ಕಡು(ಓಂಪ್ರಕಾಶ್ ಬಾಬಾರಾವ್) ಈ ಹೇಳಿಕೆ ನೀಡಿದ್ದಾರೆ. ಗುರುವಾರ ನಂದೆಡ್ ನಲ್ಲಿ ನಡೆದ ಜಾಥಾದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೈತರ ಆತ್ಮಹತ್ಯೆಗೆ ಮದ್ಯಪಾನ ಕಾರಣ ಅಂತಾ ಜನ ಹೇಳ್ತಾರೆ. ಇದು ನಿಜ ಅಲ್ಲ. ಮದ್ಯಪಾನ ಮಾಡದವರು ಯಾರಿದ್ದಾರೆ?. ಶೇ.70ರಷ್ಟು ಶಾಸಕರು, ಸಂಸದರು ಹಾಗೂ ಪತ್ರಕರ್ತರು ಮದ್ಯಪಾನ ಮಾಡುತ್ತಾರೆ. ಹೇಮಾ ಮಾಲಿನಿ ಕೂಡ ದಿನಾ ಕುಡಿಯುತ್ತಾರೆ. ಹಾಗಾಂತ ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಹಣದ ಸಮಸ್ಯೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅವರ ಉತ್ಪಾದನೆ ಹೆಚ್ಚಾಗುತ್ತಿದೆ. ಆದ್ರೆ ಆದಾಯ ಹೆಚ್ಚುತ್ತಿಲ್ಲ. ಆದ್ದರಿಂದ ಮದ್ಯಪಾನವೇ ಆತ್ಮಹತ್ಯೆಗೆ ಕಾರಣ ಎಂದು ಹೇಳುವುದು ತಪ್ಪು ಅಂತಾ ಹೇಳಿದ್ದಾರೆ.
ಪ್ರಖ್ಯಾತ ನಟಿ ಹಾಗೂ ಉತ್ತರಪ್ರದೇಶದ ಮಥುರಾದ ಬಿಜೆಪಿ ಸಂಸದೆ ಹೇಮಮಾಲಿನಿ ವಿರುದ್ಧ ನೀಡಿರುವ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 46 ವರ್ಷದ ಬಚ್ಚು ಕಡು ಈ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿ ಬಂಧನವಾಗಿದ್ದರು.
ಅಧಿಕೃತ ಅಂಕಿಅಂಶಗಳ ಪ್ರಕಾರ 2014ರಲ್ಲಿ ಮಹಾರಾಷ್ಟ್ರದಲ್ಲಿ 5,650 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ವರದಿಯಾಗಿದೆ. ಅದರಲ್ಲೂ ಈ ವರ್ಷ ಮರಾಠವಾಡಾ ಪ್ರದೇಶದಲ್ಲಿಯೇ 200 ರೈತರು ತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
