ರೈತರಿಗಾಗಿ ಸಹಾಯವಾಣಿ ತೆರೆಯಲಾಗಿದ್ದು ಚಿಂತಿಸೋ ಅಗತ್ಯವಿಲ್ಲ: ಲಕ್ಷ್ಮಣ ಸವದಿ

Public TV
2 Min Read
DCM

ರಾಯಚೂರು: ಸಾರಿಗೆ ಇಲಾಖೆಯಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಅದು ರೈತರು, ಸಾರ್ವಜನಿಕರಿಗಾಗಿ ಕಾರ್ಯ ನಿರ್ವಹಿಸುತ್ತೆ. ಪ್ರತಿಯೊಬ್ಬರಿಗೂ ಅವಶ್ಯಕತೆಗೆ ಅನುಗುಣವಾಗಿ ವಾಹನಗಳ ಸೌಲಭ್ಯ ಒದಗಿಸಲಾಗುತ್ತದೆ ಅಂತ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ಹೇಳಿದ್ದಾರೆ.

ರಾಯಚೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಲಕ್ಷಣ ಸವದಿ ಸಹಾಯವಾಣಿ ಸಂಖ್ಯೆ 08022236698, 9449863214ಕ್ಕೆ ಅವಶ್ಯಕತೆ ಇರುವವರು ಕರೆ ಮಾಡಲು ತಿಳಿಸಿದರು. ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆ ನಾನು ಉಸ್ತುವಾರಿ ವಹಿಸಿಕೊಂಡು ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದೇನೆ. ಕೊರೊನಾದ ಇಲ್ಲಿನ ವಸ್ತುಸ್ಥಿತಿ ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

RCR Watermelon

ನಾಳೆಗೆ ಮೊದಲ ಹಂತದ ಲಾಕ್ ಡೌನ್ ಮುಗಿಯುತ್ತೆ. ಈ ಲಾಕ್ ಡೌನ್ ಮುಗಿಯುತ್ತೋ ಇಲ್ವೊ ಅನ್ನೋ ಚರ್ಚೆ ನಡೆಯುತ್ತಿದೆ. ಪ್ರಧಾನಿಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾಡಿದ್ದಾರೆ. ಎಲ್ಲಾ ಮುಖ್ಯಮಂತ್ರಿಗಳು ಮುಂದುವರಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಅಥವಾ ನಾಳೆ ಪ್ರಧಾನಿಗಳು ಅದರ ತೀರ್ಮಾನ ತಗೋತಾರೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರ್ತೀವಿ ಅಂತ ಡಿಸಿಎಂ ಸವದಿ ಹೇಳಿದರು.

ಚೀನಾದಲ್ಲಿ ಹತೋಟಿಗೆ ಬಂದಿದ್ದ ಕೊರೊನಾ ಮತ್ತೆ ಪ್ರಾರಂಭವಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಇರಲಿಲ್ಲ. ಸದ್ಯ ಈಗ ಸಾಕಷ್ಟು ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸಸ್ ಬರ್ತಿವೆ. ಈ ಸವಾಲನ್ನ ಅತ್ಯಂತ ಸಮರ್ಪಕವಾಗಿ ಎದುರಿಸಬೇಕಿದೆ. ರೈತರು ಸದ್ಯದ ಪರಿಸ್ಥಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನ ಬಳಕೆ ಮಾಡಿಕೊಳ್ಳಬೇಕು. ರೈತ ಬೆಳೆದಿರುವ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.

RCR Watermelon A

ಸಾರಿಗೆ ವ್ಯವಸ್ಥೆ ಪ್ರಾರಂಭಿಸುವ ವಿಚಾರ ಒಂದು ಹಂತದಲ್ಲಿ ಚರ್ಚೆ ನಡೆದಿದೆ. ಲಾಕ್ ಡೌನ್ ಎಲ್ಲಿ ಮಾಡಬೇಕು ಹಾಗೂ ಎಲ್ಲಿ ಮಾಡಬಾರದು ಅನ್ನೋದು ಚರ್ಚೆ ನಡಿತಿದೆ. ಪಾಸಿಟಿವ್ ಇಲ್ಲದ ಜಿಲ್ಲೆಗಳಲ್ಲಿ ಸಡಿಲಗೊಳಿಸುವ ಬಗ್ಗೆ ಚರ್ಚೆ ಯೋಚನೆಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಆಧಾರದಲ್ಲಿ ಚಿಂತಿಸಲಾಗುವುದು ಅಂತ ಹೇಳಿದರು.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿರುವ ಘಟನೆ ಬಗ್ಗೆ ಮಾಹಿತಿಯಿಲ್ಲ, ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕೂಡಲೇ ಕ್ರಮ ತೆಗೆದುಕೊಳ್ಳುತ್ತೇನೆ. ಕುಡಿಯುವ ನೀರು ಹಾಗೂ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸಚಿವ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *