ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

Public TV
2 Min Read
UDP 3

– 20 ಲಕ್ಷ ಮೌಲ್ಯದ ಆಹಾರ ಕಿಟ್ ವಿತರಣೆ

ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭ ಯಕ್ಷಗಾನ ಕಲಾವಿದರು ಸೇವಾ ಆಟ, ಸಾರ್ವಜನಿಕ ಪ್ರದರ್ಶನ ಇಲ್ಲದೆ ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ನಾಲ್ಕು ಜಿಲ್ಲೆಯ ಕಲಾವಿದರ ಸಹಾಯಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮುಂದೆ ಬಂದಿದೆ.

ಕೊರೊನಾ ಆವರಿಸಿದ ನಂತರ ಯಕ್ಷಗಾನ ಮೇಳಗಳ ತಿರುಗಾಟವೆಲ್ಲ ರದ್ದಾಗಿದೆ. ಕರಾವಳಿ ಭಾಗದಲ್ಲಂತೂ ಯಕ್ಷಗಾನ ಕಲಾವಿದರಿಗೆ ಸೆಲೆಬ್ರಿಟಿ ಸ್ಥಾನಮಾನವಿದೆ. ಕಷ್ಟಕಾಲದಲ್ಲಿ ಬೇರೆಯವರಿಂದ ಸಹಾಯ ಯಾಚಿಸಲು ಕಲಾವಿದರಿಗೆ ಸ್ವಾಭಿಮಾನ ಬಿಡುವುದಿಲ್ಲ. ಕೊನೆಗೂ ಯಕ್ಷಗಾನ ಕಲಾವಿದರ ಕಷ್ಟ ಸರ್ಕಾರದ ಅರಿವಿಗೆ ಬಂದಿದೆ. ತಿರುಗಾಟ ಇಲ್ಲದೆ ನಲುಗಿ ಹೋಗಿರುವ ಕಲಾವಿದರಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಹಾರದ ಕಿಟ್ ವಿತರಿಸಿದ್ದಾರೆ.

UDP 1 2

ಉಡುಪಿ ಯಕ್ಷಗಾನ ಕಲಾರಂಗದ ಮುತುವರ್ಜಿಯಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ 1,800 ಕಲಾವಿದರನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೈ ಹಿಡಿದಿದೆ. ದೇಗುಲದ ವತಿಯಿಂದ ಯಕ್ಷಗಾನ ಕಲಾವಿದರಿಗೆ ದಿನಸಿ ಕಿಟ್ ಗಳ ವಿತರಣೆ ಮಾಡಲಾಯ್ತು. ಸುಮಾರು 20 ಲಕ್ಷ ಮೌಲ್ಯದ ಆಹಾರದ ಕಿಟ್ ಗಳನ್ನು ನೀಡಲಾಯ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಹಾಯ ಹಸ್ತಕ್ಕೆ ಚಾಲನೆ ನೀಡಿದರು. ದ.ಕ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದ ಕಲಾವಿದರಿಗೆ ನೆರವು ನೀಡಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗಸಂಸ್ಥೆಯ ಸಹಕಾರ ದಲ್ಲಿ ಕಿಟ್ ವಿತರಣೆ ಮಾಡಲಾಯ್ತು. ಕಿಟ್ ಹಂಚುವಾಗಲೂ ವಿಶೇಷ ಕ್ರಮ ಅನುಸರಿಸಲಾಗಿದೆ.

ಕಲಾವಿದರನ್ನು ಕರೆಸಿಕೊಂಡು ಕಿಟ್ ನೀಡಿ ಅವರನ್ನು ಚಿಕ್ಕವರನ್ನಾಗಿಸದೆ, ಅವರಿದ್ದಲ್ಲಿಗೇ ಹೋಗಿ ಆಯಾ ಊರುಗಳಲ್ಲಿ ಕಿಟ್ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಯಕ್ಷಗಾನ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಇನ್ನೂ ಬಡತನದಲ್ಲಿದ್ದಾರೆ. ಯಕ್ಷಗಾನ ಸೇವೆ ನಡೆದರೆ ಮಾತ್ರ ಅವರ ಹೊಟ್ಟೆ ತುಂಬುವ ಪರಿಸ್ಥಿತಿ ಇದೆ. ಯಕ್ಷಗಾನದಲ್ಲಿ ಕಲಾವಿದರು ಕಷ್ಟದಲ್ಲಿರುವಾಗ ಅವರ ಕೈ ಹಿಡಿಯುವುದು ನಮ್ಮ ಕರ್ತವ್ಯ ಎಂದರು.

UDP 2 1

ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಇ ಒ ಕೃಷ್ಣಮೂರ್ತಿ, ಮೇಳಗಳ ಯಜಮಾನ ಪಿ ಕಿಶನ್ ಹೆಗ್ಡೆ, ಕಲಾರಂಗದ ಪಧಿಕಾರಿಗಳಾದ ಎಸ್ ವಿ ಭಟ್, ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ಎಚ್ ಎನ್ ಶೃಂಗೇಶ್ವರ, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ಮೂಲಕ ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಸಚಿವರಿಗೆ, ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತೆ ಅರ್ಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *