ಮಂಡ್ಯ: ಫೆಬ್ರವರಿ 1ರಿಂದ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ನಿಯಮ ಜಾರಿಗೆ ತರಲಾಗುತ್ತಿದೆ. ಆದ್ದರಿಂದ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೆ.ಆರ್ ಪೇಟೆ ಪಟ್ಟಣ ಪೋಲಿಸ್ ಠಾಣೆಯ ಎಸ್‍ಐ ಬಿ.ಪಿ ಬ್ಯಾಟರಾಯಗೌಡ ಮನವಿ ಮಾಡಿಕೊಂಡರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ನಾಗರೀಕರ ಸಮಿತಿ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಎಸ್‍ಐ ಮಾತನಾಡಿದರು. ಕೃಷ್ಣರಾಜಪೇಟೆ ಪಟ್ಟಣವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಜನಸಾಮಾನ್ಯರಿಗೆ ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರವನ್ನು ಒದಗಿಸಿಕೊಡಲು ಪೊಲೀಸ್ ಇಲಾಖೆಯು ಬದ್ಧವಾಗಿದ್ದು, ಫೆಬ್ರವರಿ 1ನೇ ತಾರೀಖಿನಿಂದ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಆದ್ದರಿಂದ ಪೊಲೀಸರೊಂದಿಗೆ ಸಾರ್ವಜನಿಕರು ಪೂರಕವಾದ ಸಹಕರಿಸಿ ಎಂದರು.
Advertisement
Advertisement
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾರ್ವಜನಿಕರು ಪೊಲೀಸರಿಗೆ ಸಹಕಾರ ಮಾಡಬೇಕು. ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡೇ ತಮ್ಮ ಮೋಟಾರ್ ಬೈಕುಗಳನ್ನು ಚಾಲನೆ ಮಾಡಬೇಕು. ವಾಹನಗಳ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು. ಡಿಎಲ್, ವಾಹನದ ವಿಮಾ ಪ್ರತಿ ಚಾಲ್ತಿಯಲ್ಲಿರಬೇಕು ಎಂದು ತಿಳಿಸಿದರು.
Advertisement
ಜೊತೆಗೆ ಹೆಲ್ಮೆಟ್ ಧರಿಸದ ಸವಾರರಿಗೆ 500 ರೂಪಾಯಿ ದಂಡವನ್ನು ವಿಧಿಸಲಾಗುವುದು. ಈ ದಿಕ್ಕಿನಲ್ಲಿ ದ್ವಿಚಕ್ರ ವಾಹನಗಳ ಸವಾರರು ಮಾನಸಿಕವಾಗಿ ಸಿದ್ಧರಾಗಿ, ತಮ್ಮ ವಾಹನಗಳ ಎಲ್ಲಾ ದಾಖಲಾತಿಗಳನ್ನು ಚಾಲ್ತಿಯಲ್ಲಿರುವಂತೆ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು ಎಂದು ಎಸ್‍ಐ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಎಸ್‍ಐ ಶಿವಣ್ಣ, ಕ್ರೈಂ ವಿಭಾಗದ ನಾಗರಾಜು ಮತ್ತು ಸಾರ್ವಜನಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.