ಮೈಸೂರು: ಇಲ್ಲಿನ ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ದುರಂತದ ಕುರಿತು ಮಾತನಾಡಿದ ಪ್ರತ್ಯಕ್ಷದರ್ಶಿ ಮೈಸೂರಿನ ಗಿರೀಶ್, ನನ್ನ ಸಾವು ಎರಡು ಹೆಜ್ಜೆ ದೂರದಲ್ಲಿತ್ತು. ಕೇವಲ ಎರಡು ಹೆಜ್ಜೆ ಮುಂದೆ ಇಟ್ಟಿದ್ದರೆ ನಾನು ಇವತ್ತು ನಿಮ್ಮ ಮುಂದೆ ಇರ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಸ್ಫೋಟ ನಡೆದ ಜಾಗದಿಂದ ಐದಾರು ಅಡಿಯಷ್ಟೇ ದೂರ ಇದ್ದೆ. ಇನ್ನೂ ಎರಡು ಹೆಜ್ಜೆ ಮುಂದೆ ಇಟ್ಟಿದ್ದರೆ ನನ್ನ ಪ್ರಾಣಕ್ಕೆ ಅಪಾಯ ಇತ್ತು ಎಂದು ತಮಗಾದ ಅನುಭವವನ್ನು ‘ಪಬ್ಲಿಕ್ ಟಿವಿ’ ಜೊತೆ ಗಿರೀಶ್ ಹಂಚಿಕೊಂಡಿದ್ದಾರೆ.
ಸ್ಫೋಟ ಸಂಭವಿಸಿದ ಕ್ಷಣಾರ್ಧದಲ್ಲಿ ಮಾಂಸದ ತುಂಡೊಂದು ನನ್ನ ಮುಂದೆ ಬಿತ್ತು. ಬಾಂಬ್ ರೀತಿ ದೊಡ್ಡ ಬೆಂಕಿಯ ಸ್ಫೋಟವಾಯ್ತು. ನನ್ನ ಬಟ್ಟೆಗೆ ರಕ್ತ ತಾಗಿತ್ತು. ಗಾಯಾಳು ಮಹಿಳೆ ನನ್ನ ಕೈ ಹಿಡಿದ್ದಿದ್ದರು. ನಾನು ಗಾಬರಿಯಾಗಿ ನಿಂತು ಬಿಟ್ಟಿದ್ದೆ ಎಂದು ಘಟನೆಯ ವಿವರವನ್ನು ಹೇಳಿದ್ದಾರೆ.
ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬಿಸುವ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವಿಗೀಡಾಗಿದ್ದರು. ಬಲೂನ್ ಮಾರುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯ ಗ್ರಾಮದ ಸಲೀಂ ಸೇರಿ ಮೂವರು ಮೃತಪಟ್ಟಿದ್ದರು.

