ಘಾನಾ: ಇಲ್ಲಿನ ರಾಜಧಾನಿ ಅಕ್ರಾದಿಂದ (Accra) ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಘಾನಾ ವಾಯುಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ (Military Helicopter) ಪತನಗೊಂಡು ಇಬ್ಬರು ಸಚಿವರು ಸೇರಿ ಎಂಟು ಜನ ಸಾವನ್ನಪ್ಪಿದ್ದಾರೆ.
ಬುಧವಾರ (ಆ.6) ಬೆಳಿಗ್ಗೆ ಅಕ್ರಾದಿಂದ ಚಿನ್ನದ ಗಣಿಗಾರಿಕಾ ಪ್ರದೇಶವಾದ ಒಬುವಾಸಿಗೆ ಹೋಗುತ್ತಿದ್ದ Z9 ಮಿಲಿಟರಿ ಹೆಲಿಕಾಪ್ಟರ್ ಘಾನಾದ ದಕ್ಷಿಣದಲ್ಲಿರುವ ಅಶಾಂತಿ ಎಂಬಲ್ಲಿ ಪತನಗೊಂಡಿದೆ. ಈ ವೇಳೆ ಘಾನಾದ ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ, ಪರಿಸರ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಮೃತಪಟ್ಟಿರುವುದಾಗಿ ಘಾನಾ ಸರ್ಕಾರ ದೃಢಪಡಿಸಿದೆ.ಇದನ್ನೂ ಓದಿ: ಕಳ್ಳನ ಜೊತೆಗೆ ಪೊಲೀಸಪ್ಪ ರೂಮ್ ಶೇರ್ – ಕರ್ತವ್ಯ ಲೋಪ; ಪೇದೆ ಸಸ್ಪೆಂಡ್
ಇನ್ನುಳಿದಂತೆ ಮೂವರು ಅಧಿಕಾರಿಗಳು ಹಾಗೂ ಮೂವರು ಹೆಲಿಕಾಪ್ಟರ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Z9 ಮಿಲಿಟರಿ ಹೆಲಿಕಾಪ್ಟರ್‌ನ್ನು ಸಾಮಾನ್ಯವಾಗಿ ಸಾರಿಗೆ ಹಾಗೂ ವೈದ್ಯಕೀಯ ಸಂಬಂಧಿತ ವಸ್ತುಗಳನ್ನು ಸ್ಥಳಾಂತರಿಸಲು ಉಪಯೋಗಿಸುತ್ತಾರೆ. ಸದ್ಯ ಈ ಅವಘಡವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಲಾಗಿದೆ. ಇದು ಕಳೆದ ಒಂದು ದಶಕದಲ್ಲಿ ಘಾನಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ.
ಇದಕ್ಕೂ ಮುನ್ನ 2014ರಲ್ಲಿ ಹೆಲಿಕಾಪ್ಟರ್‌ವೊಂದು ಕರಾವಳಿಯಲ್ಲಿ ಪತನಗೊಂಡು ಮೂರು ಜನರು ಸಾವನ್ನಪ್ಪಿದ್ದರು. 2021ರಲ್ಲಿ ವಿಮಾನವೊಂದು ರನ್‌ವೇ ದಾಟಿದ ಬಳಿಕ ಪ್ರಯಾಣಿಕರಿದ್ದ ಬಸ್‌ಗೆ ಡಿಕ್ಕಿ ಹೊಡೆದು 10 ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ