ಕಳಸ-ಹೊರನಾಡು ಸಂಪರ್ಕ ಕಡಿತ- 2ನೇ ಬಾರಿ ಮುಳುಗಿತು ಹೆಬ್ಬಾಳೆ ಸೇತುವೆ

Public TV
2 Min Read
CKM BRIDGE 1

ಚಿಕ್ಕಮಗಳೂರು/ಕಾರವಾರ/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಎರಡನೇ ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಮೂಡಿಗೆರೆ ತಾಲೂಕಿನ ಕಳಸ ಮತ್ತು ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಸೇತುವೆಯಾದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ 15 ದಿನಗಳಲ್ಲಿ ಇದು ಎರಡನೇ ಬಾರಿ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ವಾಹನ ಸವಾರರು ಮತ್ತು ಪ್ರವಾಸಿಗರು ಸೇತುವೆಯ ಎರಡೂ ಬದಿಯಲ್ಲಿ ನೀರು ನಿಲ್ಲುವುದಕ್ಕಾಗಿ ಕಾದುನಿಂತಿದ್ದಾರೆ. ಹದಿನೈದು ದಿನಗಳ ಹಿಂದೆ ಸುರಿದ ಮಳೆಗೆ ಸೇತುವೆಯ ತಡೆಗೋಡೆಗಳು ಮುರಿದು ಬಿದ್ದಿದ್ದು, ರಸ್ತೆ ಮಧ್ಯೆಯಲ್ಲೇ ಸೇತುವೆ ಗುಂಡಿ ಬಿದ್ದಿದೆ. ಈಗ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮತ್ತೆ ಸೇತುವೆ ಮುಳುಗಡೆಯಾಗಿದೆ.

28 ckm heavy rain av sringeri bharathi beedi 4

1992ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಈ ಸೇತುವೆಗೆ ತಡೆಗೋಡೆಗಳು ಇರಲಿಲ್ಲ. ತೀರಾ ಕೆಳಮಟ್ಟದಲ್ಲಿರುವುದರಿಂದ ಭದ್ರಾ ನದಿ ಉಕ್ಕಿ ಹರಿದರೆ ಸೇತುವೆ ಮುಳುಗಡೆಯಾಗುತ್ತೆ. ಅಂದಿನಿಂದಲೂ ಸೇತುವೆ ಎತ್ತರಿಸಿ, ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಜಾನೆಯಿಂದ ಮಳೆ ಸುರಿಯುತ್ತಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು, ಸಿದ್ಧಾಪುರ ಒಂದರಲ್ಲಿಯೇ 106.8 ಮಿ.ಮೀ ಮಳೆಯಾಗಿದೆ. ಹೆಚ್ಚಿನ ಮಳೆಯಿಂದಾಗಿ ಈ ಭಾಗದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಕರಾವಳಿ ಭಾಗದ ಭಟ್ಕಳದಲ್ಲಿ ಅತಿಹೆಚ್ಚು ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿ 10 ರಿಂದ 12 ಅಡಿಯಷ್ಟು ಎತ್ತರದ ಅಲೆಗಳ ಏಳತೊಡಗಿದೆ. ಮುಂಜಾಗೃತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

CKM 1

ಸೋಮವಾರ ರಾತ್ರಿಯಿಂದ ಶಿವಮೊಗ್ಗ ಜಿಲ್ಲಾದ್ಯಂತ ಭರ್ಜರಿ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ತುಂಗಾ, ಕುಶಾವತಿ, ವರದಾ ನದಿಗಳು ತುಂಬಿ ಹರಿಯುತ್ತಿವೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿ ಆಪಾಯದಮಟ್ಟದಲ್ಲಿ ಹರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಇದೂವರೆಗೂ ಯಾವುದೇ ಹಾನಿ ಮಾಡಿಲ್ಲ. ಆದರೆ ಈ ದಿನ ಕೂಡ ಮಳೆ ಸುರಿದರೆ ಮಲೆನಾಡಿನ ಹಲವೆಡೆ ಧರೆ ಕುಸಿಯುವ ಅಪಾಯವಿದೆ.

Share This Article
Leave a Comment

Leave a Reply

Your email address will not be published. Required fields are marked *