ಬೆಂಗಳೂರು: ಹೆಬ್ಬಾಳದ ಫ್ಲೈ ಓವರ್ ಬಳಿ ಡಿವೈಡರ್ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಅಕ್ಷಯ ಕುಟುಂಬಕ್ಕೆ ಶಾಸಕ ಭೈರತಿ ಸುರೇಶ್ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಆಗಿದ್ದು ಏನು?:
ಹೆಬ್ಬಾಳದ ಫ್ಲೈಓವರ್ ಬಳಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿದ್ದ ಪರಿಣಾಮ ಪಾದಚಾರಿಗಳು ರಸ್ತೆ ಮೇಲೆ ಓಡಾಡುತ್ತಾ ರಸ್ತೆ ದಾಟುತ್ತಿದ್ದರು. ಮಧ್ಯಾಹ್ನ 12:30ರ ವೇಳೆಗೆ ಬಸ್ ಇಳಿದ ಬಾಲಕಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿರುವುದನ್ನು ನೋಡಿ, ಡಿವೈಡರ್ ದಾಟಿ ರಸ್ತೆ ಕ್ರಾಸ್ ಮಾಡುತ್ತಿದ್ದಳು. ಐದು ಜನ ವಿದ್ಯಾರ್ಥಿಗಳು ಒಟ್ಟಿಗೆ ಡಿವೈಡರ್ ಜಂಪ್ ಮಾಡಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರು ಮತ್ತು ಬೈಕ್ ಸಡನ್ ಆಗಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ, ಕಾರು, ಬೈಕ್‍ಗೆ ಡಿಕ್ಕಿಯಾಗಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಸಾವನ್ನಪ್ಪಿದ್ದು, ಇತರೇ ಎಂಟು ಜನರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ
ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಭೈರತಿ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಜೀವ ಅಮೂಲ್ಯವಾದದ್ದು, ಬೆಲೆ ಕಟ್ಟಲಾಗುವುದಿಲ್ಲ. ಈ ದುರ್ಘಟನೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಕಮೀಷನರ್‍ಗೆ ಸೂಚನೆ ನೀಡಿದ್ದೇನೆ. ಅಂಡರ್ ಪಾಸ್ ನೀರು ತುಂಬಿಕೊಂಡಿದ್ದರಿಂದಾಗಿ ಬಾಲಕಿ ರಸ್ತೆ ದಾಟೋಕೆ ಹೋಗಿದ್ದಾಳೆ. ದುರಂತ ಘಟನೆ ನಡೆದು ಹೋಗಿದೆ. ಈ ಪ್ರದೇಶದಲ್ಲಿ ಯಾರು ಕೂಡ ವಾಹನಗಳ ಹೆಚ್ಚಿನ ಓಡಾಟದ ವೇಳೆ ರಸ್ತೆ ದಾಟುವ ಸಾಹಸ ಮಾಡಬಾರದು. ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರವಾಗಿ ಕೊಡುತ್ತೇನೆ ಎಂದರು.