– ಕೆಆರ್‍ಎಸ್‍ನಿಂದ ಹೆಚ್ಚಿನ ನೀರು ಬಿಡುಗಡೆ
ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದ್ದು, ಹಲವು ಭಾಗದಲ್ಲಿ ವಿದ್ಯುತ್ ಕಡಿತವಾಗಿದೆ. ನಾಗಮಂಗಲದ ಕಸುವಿನಹಳ್ಳಿಯಲ್ಲಿ ಸಿಡಿಲಿಗೆ 55 ವರ್ಷದ ಪುಟ್ಟತಾಯಮ್ಮ ಸಾವನ್ನಪ್ಪಿದ್ದಾರೆ.
ಮಳೆ ಬಂದಿದ್ದರಿಂದ ಗವಿರಂಗಪ್ಪ ದೇವಸ್ಥಾನ ಮುಂಭಾಗದ ಮರದ ಕೆಳಗೆ ನಿಂತುಕೊಂಡಿದ್ದರು. ಹಾವೇರಿಯ ರಾಣೆಬೆನ್ನೂರಿನ ಕುದರಿಹಾಳ ಗ್ರಾಮದಲ್ಲಿ ಸಿಡಿಲಿಗೆ 45 ವರ್ಷದ ಶಿವಾನಂದಪ್ಪ ಸಹ ಬಲಿಯಾಗಿದ್ದಾರೆ. ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಹುಗುಲೂರಿನಲ್ಲಿ ಸಿಡಿಲು ಬಡಿದು 24 ವರ್ಷದ ಮಹ್ಮದ್ ರಫಿ ನಿಧನರಾಗಿದ್ದಾರೆ.
ಉಡುಪಿಯಲ್ಲಿ ಏಕಾಏಕಿ ಧಾರಾಕಾರ ಮಳೆ ಅಬ್ಬರಕ್ಕೆ ಪೆರ್ಡೂರು-ಹರಿಖಂಡಿಗೆ ಸಂಪರ್ಕ ರಸ್ತೆ ಕುಸಿದು ಬಿದ್ದಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಕುಸಿದಿದೆ. ಮಳೆಯ ಅಬ್ಬರಕ್ಕೆ ಪೆರ್ಡೂರು- ಹರಿಖಂಡಿಗೆ ಸಂಪರ್ಕ ರಸ್ತೆ ಕುಸಿದಿದೆ. ಜನ ನೋಡ ನೋಡುತ್ತಿದಂತೆ ಗದ್ದೆ ಪಕ್ಕದ ಭೂಮಿ ಕುಸಿದಿದ್ದು, ರಸ್ತೆ ಕೊಚ್ಚಿಕೊಂಡು ಹೋಗಿದೆ. ಶಿವಮೊಗ್ಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಂಗಳೂರಿನಲ್ಲಿ ಎರಡು ದಿನ ಸಿಡಿಲು-ಮಿಂಚು ಸಹಿತ ಮಳೆಯಾಗಲಿದೆ.
ಇತ್ತ ಮಂಡ್ಯದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‍ಎಸ್ ಒಳ ಹರಿವಿನಲ್ಲಿ ಹೆಚ್ಚಾಗಿದೆ. 10 ರಿಂದ 25 ಸಾವಿರ ಕ್ಯೂಸೆಕ್ ಹೊರ ಹರಿವಿಗೆ ನಿರ್ಧಾರ ಮಾಡಲಾಗಿದೆ. ಹೀಗಾಗಿ, ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ನದಿ ಪಾತ್ರಕ್ಕೆ ಜನ-ಜಾನುವಾರುಗಳನ್ನು ಬಿಡದಂತೆಯೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.