-ಚಿಕ್ಕೋಡಿಯಲ್ಲಿ ಸೇತುವೆ, ದೇವಾಲಯ ಜಲಾವೃತ
– ಜಮಖಂಡಿ, ರಾಯಚೂರಲ್ಲಿ ಹೆಚ್ಚಿದ ಆತಂಕ
ರಾಯಚೂರು/ಬೆಳಗಾವಿ/ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕೊಯ್ನಾ ಡ್ಯಾಂ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರಬಿಟ್ಟಿದ್ದಾರೆ. ಇದರಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ತುಂಬಿ ಹರಿಯುತ್ತಿವೆ. ಮಾರ್ಕಂಡೇಯ ನದಿಯ ಗೊಡಚಿನಮಲ್ಕಿ ಜಲಪಾತದಲ್ಲಿ ಭಾರಿ ನೀರು ಬರುತ್ತಿದೆ. ನಯನಮನೊಹರ ದೃಶ್ಯ ನೋಡಲು ಪ್ರವಾಸಿಗರ ದಂಡು ಹರಿದು ಬಂತು.
ಬೆಳಗಾವಿ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಪ್ರಸಿದ್ಧ ಕೋಲ್ಹಾಪುರ ಮಹಾಲಕ್ಷ್ಮಿ ದೇವಾಸ್ಥಾನದ ಸುತ್ತ ಪ್ರವಾಹದಂತೆ ನೀರು ಹರಿದಿದೆ. ನೀರಿನ ರಭಸಕ್ಕೆ ದೇವಾಸ್ಥಾನದ ಅಕ್ಕ-ಪಕ್ಕ ನಿಲ್ಲಿಸಿದ ಬೈಕ್‍ಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಸಿನಿಮೀಯ ಶೈಲಿ ರೀತಿಯಲ್ಲಿ ಕಂಡು ಬಂದಿದೆ. ಪ್ರವಾಹ ರೂಪದಂತೆ ಬಂದ ನೀರಿನ ರಭಸಕ್ಕೆ ಹೂವಿನ ಅಂಗಡಿ ಹಾಗೂ ರಸ್ತೆಬದಿ ನಿಲ್ಲಿಸಿದ ವಾಹನಗಳು ಮಾರು ದೂರ ಹರಿದು ಹೋಗಿವೆ.
Advertisement
ಮಿಲಿಟರಿ ಪಡೆ ಆಗಮನ:
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಚಿಕ್ಕೋಡಿಗೆ ಮಿಲಿಟರಿ ಪಡೆ ಆಗಮಿಸಿದೆ. ತಲಾ ಐವತ್ತು ಸೈನಿಕರಿರುವ 2 ತುಕಡಿಗಳಲ್ಲಿ ಯೋಧರು ಆಗಮಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರನ್ನ ರಕ್ಷಣೆಗೆ ಬೇಕಾದ ಸಾಮಾಗ್ರಿಗಳ ಸಮೇತ ಧಾವಿಸಿದ್ದಾರೆ. ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿದ್ದು, ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.
Advertisement
Advertisement
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೊಯ್ನಾ ಡ್ಯಾಂ ಭರ್ತಿಯಾಗಿದ್ದು, 6 ಗೇಟ್‍ಗಳಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಚಿಕ್ಕೋಡಿ ಉಪ ವಿಭಾಗದ 37 ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.
Advertisement
ಕೃಷ್ಣಾ ನದಿಯ ಪ್ರವಾಹಪೀಡಿತ ಪ್ರದೇಶದ ಜನರಿಗಾಗಿ 8 ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ. ಇಂಗಳಿ, ಯಡೂರವಾಡಿ, ಕಾಗವಾಡ ತಾಲೂಕಿನ ಜುಗೂಳು/ಶಹಾಪೂರ, ಬಣಜವಾಡ, ಅಥಣಿ ತಾಲೂಕಿನ ರಡೇರಟ್ಟಿ, ಸಪ್ತಸಾಗರ, ನಾಗನೂರು, ರಾಯಬಾಗ ತಾಲೂಕಿನ ಶಿರಗೂರು ಗ್ರಾಮಗಳಲ್ಲಿ ಗಂಜಿಕೇಂದ್ರಗಳು ಆರಂಭಗೊಂಡಿವೆ. ಆಯಾ ಗ್ರಾಮದ ಶಾಲೆ, ಸಮುದಾಯ ಭವನ, ಅಂಗನವಾಡಿಗಳಲ್ಲಿ ಗಂಜಿಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ ಸ್ಥಳಾಂತರಗೊಂಡ ಜನರಿಗೆ ಗಂಜಿಕೇಂದ್ರಗಳಲ್ಲಿ ಊಟ, ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿಕೊಟ್ಟಿದೆ.
ರಸ್ತೆ ಸಂಪರ್ಕ ಕಡಿತ: ಅಬ್ಬರದ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ತಾಲೂಕಿನ ಜಂಬಗಿ-ತುಬಚಿ ರಸ್ತೆ ಸಂಪರ್ಕ ಕಡಿತವಾಗಿದೆ. ಮುತ್ತೂರು, ಕಂಕಣವಾಡಿ, ತುಬುಚಿ, ಶೂರ್ಪಾಲಿ ಗ್ರಾಮಗಳು ಜಲಾವೃತವಾಗಿವೆ. ಹಿಪ್ಪರಗಿ ಜಲಾಶಯಕ್ಕೆ 2.28 ಲಕ್ಷ ಕ್ಯೂಸೆಕ್ ಒಳಹರಿವಿನಿಂದಾಗಿ ಸುಮಾರು 25 ಗ್ರಾಮಗಳಿಗೆ ಭಾಗಶ ಪ್ರವಾಹದ ಭೀತಿ ಎದುರಾಗಿದೆ.
ಮುತ್ತೂರು ಗ್ರಾಮದ ತೋಟದ ವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ವಸತಿ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಜಲಾವೃತವಾದ ಗ್ರಾಮಗಳಿಗೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಶಾಸಕರು ಸೂಚನೆ ನೀಡಿದರು.
ಸೇತುವೆ ಮುಳುಗಡೆ: ರಾಯಚೂರಿನಲ್ಲಿ ಸಹ ಪ್ರವಾಹ ಭೀತಿ ಹೆಚ್ಚಾಗಿದೆ. ನಾರಾಯಣಪುರ ಡ್ಯಾಂನಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣವನ್ನು 2 ಲಕ್ಷ ಸಾವಿರ ಕ್ಯೂಸೆಕ್‍ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ, ರಾಯಚೂರು ಜಿಲ್ಲೆಯಲ್ಲಿ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ದೇವದುರ್ಗದ ಹೂವಿನಹೆಡಗಿ, ಲಿಂಗಸುಗೂರಿನ ಯರಗೋಡಿ ಸೇತುವೆ ಮುಳುಗಡೆಯಾಗಿದೆ. ತುರ್ತು ಸ್ಥಿತಿಯಲ್ಲಿ ರಕ್ಷಿಸಲು ಎನ್ ಡಿಆರ್ ಎಫ್ ನ 30 ಸಿಬ್ಬಂದಿ ಹಾಗು 2 ಬೋಟುಗಳು ಸಿದ್ಧವಾಗಿವೆ.
ನಡುಗಡ್ಡೆ ಪ್ರದೇಶದಲ್ಲಿ ಆಹಾರ ಧಾನ್ಯ, ಅಗತ್ಯ ವಸ್ತುಗಳ ವಿತರಣೆ ಮಾಡಲಾಗುತ್ತಿದೆ. ನದಿಗೆ ಇಳಿಯದಂತೆ ಡಂಗೂರ ಹಾಗು ಮೈಕ್ ಮುಖಾಂತರ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗುವ ಹಂತದಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದಲ್ಲಿ ಮಳೆ ಅಬ್ಬರ ಕಂಡು ಜನ ಕಂಗಾಲಾಗಿದ್ದಾರೆ. ಕೊಟ್ಟಿಗೆಹಾರ ಮಾರ್ಗದಿಂದ ಆಲೇಖಾನ್ ಹೊರಟ್ಟಿ, ಮಲೇಮನೆ ಸೇರಿದಂತೆ ನಾಲ್ಕು ಗ್ರಾಮಕ್ಕೆ ಸಂಪರ್ಕ ಕಲ್ಪಿಸೋ ಮಾರ್ಗದ ಮೇಲೆ ಬೃಹತ್ ಬಂಡೆ ಕುಸಿದಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಮಕ್ಕಳು ಶಾಲೆಗೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಈ ಬಂಡೆ ಎರಡು ಅಡಿಯಷ್ಟು ಪಕ್ಕಕ್ಕೆ ಸರಿದಿದ್ರೆ ಕೊಟ್ಟಿಗೆಹಾರ-ಧರ್ಮಸ್ಥಳ-ಮಂಗಳೂರು ಮಾರ್ಗದ ಸಂಚಾರ ಸ್ಥಗಿತಗೊಳ್ಳುತ್ತಿತ್ತು.