ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಹೆಚ್ಚಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆ (Heavy Rain) ಹಿನ್ನೆಲೆ ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.
ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಪಶ್ಚಿಮ ಘಟ್ಟ ಭಾಗದ ಹೆದ್ದಾರಿ ಭಾಗದಲ್ಲಿ ಭೂಕುಸಿತ (Landslide) ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 766ನಲ್ಲಿ (ಇ) ಗುಡ್ಡ ಕುಸಿತದಿಂದ ರಸ್ತೆಗೆ ಹಾನಿಯಾಗಿದ್ದು, ರಸ್ತೆಪಕ್ಕದಲ್ಲೇ 150 ಅಡಿಗೂ ಹೆಚ್ಚು ಗುಡ್ಡ ಕುಸಿದಿದೆ. ಸದ್ಯ ಜಿಲ್ಲಾಡಳಿತ ಹೆದ್ದಾರಿಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ
ಕಾಫಿನಾಡ ಮಲೆನಾಡಲ್ಲಿ ರಣ ಗಾಳಿ-ಮಳೆ ಮುಂದುವರಿದಿದ್ದು, ನಿರಂತರ ಧಾರಾಕಾರ ಮಳೆಗೆ ಶೃಂಗೇರಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ಜನಸಾಮಾನ್ಯರ ಜೊತೆ ಶಾರದಾಂಬೆ ಭಕ್ತರು ಕೂಡ ಕಂಗಾಲಾಗಿದ್ದಾರೆ. ತುಂಗಾ ನದಿಯ ಅಬ್ಬರಕ್ಕೆ ಪ್ರವಾಸಿಗರ ಕಾರುಗಳು ಮುಳುಗಡೆಯಾಗಿದೆ. ಗಾಂಧಿ ಮೈದಾನದಲ್ಲಿ ನಿಂತಿದ್ದ ಪ್ರವಾಸಿ ಕಾರುಗಳು ಜಲಾವೃತಗೊಂಡಿದೆ. ಶನಿವಾರ ಬೆಳಗ್ಗೆಯಿಂದಲೂ ಶೃಂಗೇರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಾ-ಭದ್ರಾ ನದಿಯ ನೀರಿನ ಮಟ್ಟ ಕ್ಷಣ-ಕ್ಷಣಕ್ಕೂ ಏರಿಕೆಯಾಗುತ್ತಿದೆ. ತುಂಗಾ-ಭದ್ರಾ ನದಿಯ ಇಕ್ಕೆಲಗಳ ತೋಟಗಳು ಬಹುತೇಕ ಜಲಾವೃತಗೊಂಡಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ