ಹಾಸನ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರೈಲು ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಹಾಸನ ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಸನ-ಮಂಗಳೂರು ಮಾರ್ಗದಲ್ಲಿ ಮೂರುಕಡೆ ಭೂಕುಸಿತ ಉಂಟಾಗಿದೆ. ಯಡಕುಮೇರಿಯ 218 ಮೈಲಿಯಲ್ಲಿ ಭೂಕುಸಿತ ಉಂಟಾಗಿದ್ದು ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
Advertisement
ಬೆಂಗಳೂರಿಂದ-ಮಂಗಳೂರಿಗೆ ಹೋಗುತ್ತಿದ್ದ ರೈಲು ಹಾಸನದಲ್ಲಿ ನಿಂತುಕೊಂಡಿದೆ. ಇದರಿಂದ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ನಿಗದಿತ ಜಾಗಗಳಿಗೆ ತಲುಪಲಾಗದೇ ಪರದಾಡಬೇಕಾಗಿದೆ.
Advertisement
Advertisement
ಹಾಸನದಿಂದ ಬೆಂಗಳೂರಿಗೆ ಹೋಗಲು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. 1200 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್ ದರ ಮರುಪಾವತಿ ಮಾಡಿದೆ. ಮಾರ್ಗಮಧ್ಯೆ ಗುಡ್ಡ ಕುಸಿತದಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸಂಜೆ ವೇಳೆಗೆ ರೈಲು ಹಳಿ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಹಾಸನ ರೈಲ್ವೆ ನಿಲ್ದಾಣಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.
Advertisement
ಯಡಕುಮೇರಿ-ಕಡಗರವಳ್ಳಿ ನಡುವೆ ನಾಲ್ಕುಕಡೆ ಗುಡ್ಡ ಕುಸಿದು ಯಶವಂತಪುರದಿಂದ ಕಾರವಾರಕ್ಕೆ ಹೋಗುವ ರೈಲಿನ ಪ್ರಯಾಣ ರದ್ದುಗೊಂಡಿದೆ. ಅಲ್ಲಿಗೆ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗಿದೆ. ಆರು ಬಸ್ ಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ರೈಲಿನ ಮಾರ್ಗವನ್ನೂ ಬದಲಾವಣೆ ಮಾಡಲಾಗಿದೆ.