ಬೆಂಗಳೂರು: ಮಂಗಳವಾರ ಒಂದು ದಿನ ಗ್ಯಾಪ್ ಕೊಟ್ಟಿದ್ದ ಮಳೆರಾಯ ಬುಧವಾರ ರಾತ್ರಿ ಮತ್ತೆ ಬೆಂಗಳೂರಿಗರನ್ನು ಕಂಗೆಡಿಸಿದ್ದಾನೆ. ನಗರದ ವಸಂತ ನಗರ, ಓಕಳೀಪುರಂ, ಬಿಟಿಎಂಲೇಔಟ್, ಕನ್ನಿಂಗ್ ಹ್ಯಾಮ್ ರೋಡ್, ಶಿವಾಜಿನಗರ, ಮಲ್ಲೇಶ್ವರಂ, ಕೋರಮಂಗಲ, ಹಲಸೂರು ಗೇಟ್, ಬನ್ನೇರುಘಟ್ಟ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಕೋರಮಂಗಲ 4ನೇ ಬ್ಲಾಕ್ ಬಳಿ ರಸ್ತೆಗಳು ಕೆರೆಯಂತಾಗಿ, ವಾಹನ ಸವಾರರು ಪರದಾಡಿದರು. ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿ, ವಸ್ತುಗಳೆಲ್ಲಾ ನೀರಿನಲ್ಲಿ ತೇಲುತ್ತಿದ್ದವು. ಮತ್ತೊಂದ ಕಡೆ ಬೃಹತ್ ಮರ ಧರೆಗುರುಳಿತ್ತು. ಓಕಳೀಪುರಂ ಅಂಡರ್ ಪಾಸ್ ಜಲಾವೃತಗೊಂಡು, ವಾಹನ ಸವಾರರು ಹೈರಾಣಾದರು. ಬಿಟಿಎಂ ಲೇಔಟ್ ಸುತ್ತಮುತ್ತಲ ರಸ್ತೆಗಳು ಜಲಾವೃತಗೊಂಡು ಬೈಕ್‍ಗಳು ಆಟಿಕೆಯಂತೆ ತೇಲಾಡಿದವು. ದೊಮ್ಮಲೂರಿನಲ್ಲಿ ಸತತವಾಗಿ 1 ಗಂಟೆ 86 ಮಿ.ಮೀ ಮಳೆಯಾಗಿದ್ದು, ರಸ್ತೆಗಳು ಹಳ್ಳ ಬಿದ್ದಿದೆ. ಪರಿಣಾಮ ಹಲಸೂರು ಗೇಟ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊರಮಂಗಲ 4ನೇ ಬ್ಲಾಕ್ ಬಳಿಯ ರಸ್ತೆಗಳು ಕೆರೆಯಂತಾಗಿದೆ
ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ..?
ದೊಮ್ಮಲೂರು – 86 ಮಿ.ಮೀ.
ಕೋನೇನ ಅಗ್ರಹಾರ – 86 ಮಿ.ಮೀ.
ಕೆಆರ್ ಪುರಂ – 66 ಮಿ.ಮೀ.
ಸಂಪಂಗಿರಾಮನಗರ – 64 ಮಿ.ಮೀ.
ಬೊಮ್ಮನಹಳ್ಳಿ – 54 ಮಿ.ಮೀ.
ಮಹದೇವಪುರ – 62 ಮಿ.ಮೀ.
ಮಳೆ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಬಿಬಿಎಂಪಿ ಕಮೀಷನರ್ ಹಾಗೂ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೆ ತಗ್ಗುಪ್ರದೇಶ ಹಾಗೂ ಮಳೆಯಿಂದ ಅಪಾಯ ಎದುರಾಗುವ ಪ್ರದೇಶದತ್ತ ಗಮನಹರಿಸುವಂತೆ ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇನ್ನೂ 2 ದಿನ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv