ಬೆಳಗಾವಿ/ವಿಜಯಪುರ: ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಜೊತೆಗೆ ಮಹಾರಾಷ್ಟ್ರದಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಕಾರಣ ಕೃಷ್ಣಾ ನದಿ ನೀರಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಪರಿಣಾಮ ಚಿಕ್ಕೋಡಿಯ ಕಲ್ಲೋಳ-ಯಡೂರು ಸೇತುವೆ ಮತ್ತೆ ಮುಳುಗಡೆಯಾಗಿದೆ.
ರಾಯಭಾಗದ ಬಾರ್ & ರೆಸ್ಟೋರೆಂಟ್‍ಗೆ ನೀರು ನುಗ್ಗಿದೆ. ಚಿಕ್ಕೋಡಿ- ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಮರಗಳು ಧರೆಗುರುಳಿವೆ. ರಾಯಚೂರಲ್ಲಿ ಮಸ್ಕಿ ಕಿರು ಜಲಾಶಯದ ನಾಲ್ಕು ಗೇಟ್‍ಗಳಿಂದ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ಎರಡು ಸೇತುವೆ ಮುಳುಗಡೆಯಾಗಿದೆ. ಪರಿಣಾಮ 12 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಮನೆ ಕುಸಿದು 2 ಜಾನುವಾರು ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿವೆ. ಬೆಂಗಳೂರಲ್ಲೂ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.
Advertisement
Advertisement
ವಿಜಯಪುರ ಜಿಲ್ಲೆಯ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಜಿಲ್ಲೆಯ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ತಿಕೋಟಾ ತಾಲೂಕಿನ ಸಾರವಾಡ ಗ್ರಾಮದ ಬಳಿಯ ಜಮೀನಿಗಳಿಗೆ ಅಪಾರ ಪ್ರಮಾಣದ ನದಿಯ ನೀರು ನುಗ್ಗಿದೆ. ಇದರಿಂದ ಜೋಳ, ತೊಗರಿ ಬೆಳೆ ಸೇರಿದಂತೆ ಹಲವಾರು ಬೆಳೆಗಳು ಜಲಾವೃತಗೊಂಡಿವೆ. ತಿಕೋಟಾ ಭಾಗದ ಕಣಮುಚನಾಳ, ಧನ್ಯಾಳ ಭಾಗದಲ್ಲಿ ಮಳೆ ಹಿನ್ನೆಲೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬರದಿಂದ ತತ್ತರಿಸಿದ್ದ ರೈತರು ಬೆಳದಿದ್ದ ಅಲ್ಪಸ್ವಲ್ಪ ಜೋಳ, ತೊಗರಿ ಬೆಳೆ ಕೂಡ ವರುಣ ದೇವ ಆವರಿಸಿಕೊಳ್ಳುತ್ತಾನೆ ಎಂದು ಚಿಂತೆಗೀಡಾಗಿದ್ದಾರೆ.